ಸೋಮವಾರಪೇಟೆ, ಆ. 20: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.

ರೈತವಿರೋಧಿ ಭೂಸುಧಾರಣಾ, ಎ.ಪಿ.ಎಂ.ಸಿ. ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗಳನ್ನು ವಾಪಸ್ಸು ಪಡೆಯಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿ, ಬಿಜೆಪಿ ನೇತೃತ್ವದ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕೋವಿಡ್-19ಸೋಂಕು ನಿಯಂತ್ರಣದ ಕಾರ್ಯಕ್ರಮದಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರದ ಪ್ರಕರಣವನ್ನು ಉಚ್ಚನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಒತ್ತಾಯಿಸಿದರು.

ಇಡೀ ಭಾರತದಲ್ಲಿಯೇ ರೈತಪರ ಹಾಗೂ ಪ್ರಗತಿ ಪರ ಎಂಬ ಹೆಗ್ಗಳಿಕೆಗೆ ಹೊಂದಿರುವ ಕರ್ನಾಟಕ ಭೂ ಸುಧಾರಣಾ ಕಾಯಿದೆ 1961ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತಂದು ಕಾಯಿದೆಯ ಆತ್ಮವಾಗಿರುವ ಸೆಕ್ಷನ್ 64, 79ಎ, 29ಬಿ, 79ಸಿ ಮತ್ತು 80ನ್ನು ಬಹುತೇಕ ನಿಷ್ಕ್ರೀಯೆಗೊಳಿಸಿದೆ. 1974ರಂದು ಜಾರಿಗೆ ಬಂದ ಭೂ ಸುಧಾರಣ ಕಾಯಿದೆಯ ಉದ್ದೇಶ ಉಳುವವನೆ ಭೂಮಿಯ ಒಡೆಯ ಎಂಬುದಾಗಿತ್ತು. ಆದರೆ, ಈ ಸುಗ್ರಿವಾಜ್ಞೆಯಿಂದ ಉಳ್ಳವನೆ ಭೂಮಿಯ ಒಡೆಯ ಎಂಬಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ ದೂರಿದರು.

ರಾಜ್ಯಪಾಲರಿಗೆ ತಹಶೀಲ್ದಾರ್ ಕಚೇರಿ ಮೂಲಕ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ಡಿಸೋಜಾ, ವೀಕ್ಷಕ ಎಡ್ವಿನ್, ಪರಿಶಿಷ್ಟ ಜಾತಿ ರಾಜ್ಯ ಸಮಿತಿ ಸದಸ್ಯ ಬಿ.ಈ. ಜಯೇಂದ್ರ, ಮಡಿಕೇರಿ ಕ್ಷೇತ್ರದ ಅಧ್ಯಕ್ಷ ಮಿಥುನ್, ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ಸುನಿಲ್, ಕಾಂಗ್ರೆಸ್ ಮುಖಂಡರುಗಳಾದ ಕೆ.ಎಂ. ಲೋಕೇಶ್, ಎಚ್.ಎ. ನಾಗರಾಜು, ಭಾಗ್ಯ, ಎಚ್.ಸಿ. ನಾಗೇಶ್ ಮತ್ತಿತರರು ಇದ್ದರು.