ಕಣಿವೆ, ಆ. 20: ಹೂಳು ತುಂಬಿ ಕಾಡು ಗಿಡಗಳು ಬೆಳೆದ ನಾಲೆಯಲ್ಲಿ ನೀರು ಸರಾಗವಾಗಿ ಹರಿಯದೇ ರೈತರ ಮನೆಗಳ ಆವರಣದಲ್ಲಿ ಹರಿದು ಹೆಚ್ಚು ಹಾನಿ ಉಂಟಾಗಿರುವ ಬಗ್ಗೆ ‘ಶಕ್ತಿ’ ವರದಿ ಪ್ರಕಟಿಸಿತ್ತು. ಈ ಬಗ್ಗೆ ಸ್ಥಳಕ್ಕೆ ತೆರಳಿ ವಸ್ತು ಸ್ಥಿತಿ ಪರಿಶೀಲನೆ ನಡೆಸಿದ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ಚನ್ನಕೇಶವ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್ ಗುರುವಾರ ಚಿಕ್ಲಿಹೊಳೆ ನಾಲೆಗಳ ಏರಿಯ ಮೇಲೆ ನಡೆದು ಇಲ್ಲಿನ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಖುದ್ದು ಪರಿಶೀಲನೆ ನಡೆಸಿದರು. ಈ ಸಂದರ್ಭ ಅಧಿಕಾರಿಗಳ ಬರುವಿಕೆಗೆ ಕಾದು ಕುಳಿತಿದ್ದ ಅಲ್ಲಿನ ರೈತರು ಅಧೀಕ್ಷಕ ಅಭಿಯಂತರರನ್ನು ತರಾಟೆ ತೆಗೆದುಕೊಂಡು, ನಿಮಗೆ ರೈತರ ಸಮಸ್ಯೆಗಳ ಅರಿವಿದೆಯಾ ? ನೀವು ರೈತರ ಮಕ್ಕಳಲ್ಲವಾ ? ಬೇಸಿಗೆಯಲ್ಲಿ ನಾಲೆಗಳ ಸ್ಥಿತಿ ಗತಿಗಳನ್ನು ಪರಿಶೀಲಿಸಿ ಸರಿಪಡಿಸಿ ಮಳೆಗಾಲದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಸರಾಗವಾಗಿ ನಾಲೆಯಲ್ಲಿ ನೀರು ಹರಿವಂತೆ ನೋಡಿಕೊಳ್ಳಬೇಕಾದ ಅಧಿಕಾರಿಗಳು, ಚಿಕ್ಲಿಹೊಳೆ ಎಲ್ಲಿದೆ ? ಹೇಗಿದೆ? ನಾಲೆಗಳು ಇದಿಯ ಇಲ್ಲವಾ ಎಂದು ತಿಳಿಯದ ಅಧಿಕಾರಿಗಳಿಗೆ ರೈತರು ಖುದ್ದು ಕಚೇರಿಗೆ ಬಂದು ಮನವಿ ಕೊಟ್ಟರೂ ಸಮಸ್ಯೆ ಬಗೆಹರಿಸುವ ಸೌಜನ್ಯ ತೋರಿಸುತ್ತಿಲ್ಲ ಎಂದು ಆರೋಪಿಸಿದರು.
ಬಳಿಕ ಚಿಕ್ಲಿಹೊಳೆ ನಾಲೆಯ ಐದನೇ ಕಿಮೀ ನಿಂದ ಏಳನೇ ಕಿಮೀ ವರೆಗೆ ನಡೆದೇ ಸಾಗಿದ ಅಧಿಕಾರಿಗಳಿಗೆ ಹೂಳು ತುಂಬಿ ಮುಂದೆ ನೀರನ್ನು ಹರಿಸದ ಕಾಲುವೆ ಒಂದೆಡೆ ಸ್ವಾಗತಿಸಿದರೆ, ಅರಣ್ಯದೊಳಗಿನ ಕೆರೆಯ ಏರಿ ಒಡೆದು ಹರಿದು ಬಂದ ನೀರು ನಾಲೆಯ ಒಂದು ಏರಿಯನ್ನು ಸೀಳಿ ತಳಭಾಗದಲ್ಲಿನ ರೈತರ ಮನೆಗಳನ್ನು ಹಾಗೂ ಕೃಷಿ ಚಟುವಟಿಕೆಯ ಗದ್ದೆಗಳಲ್ಲಿ ಹರಿದು ಕಾವೇರಿ ಸೇರುತ್ತಿದ್ದ ಚಿತ್ರಣಗಳು ಸ್ವಾಗತಿಸಿದವು. ಈ ಸಂದರ್ಭದಲ್ಲಿ ಸ್ಥಳೀಯ ರೈತರಾದ ಶೀಲಾವತಿ, ವಿಶ್ವನಾಥ್, ರಮೇಶ, ಸಣ್ಣಪ್ಪ, ಪೂವಯ್ಯ, ಕಾರ್ಯಪ್ಪ, ಮಾಚಯ್ಯ, ಲುಸ್ವಾಪತಿ, ಬಸವನಹಳ್ಳಿ ಲ್ಯಾಂಪ್ ಸೊಸೈಟಿ ಅಧ್ಯಕ್ಷ ಆರ್.ಕೆ. ಚಂದ್ರು ಇದ್ದರು. ರೈತರನ್ನು ಸಮಾಧಾನಪಡಿಸಿದ ಅಧೀಕ್ಷಕ ಅಭಿಯಂತರ ಚನ್ನಕೇಶವ ಅವರು ಜೊತೆಯಲ್ಲೇ ಕರೆದೊಯ್ದಿದ್ದ ಸಹಾಯಕ ಅಭಿಯಂತರ ಮಹೇಂದ್ರಕುಮಾರ್ ಹಾಗೂ ಕಿರಿಯ ಅಭಿಯಂತರ ಕಿರಣ್ ಅವರಿಗೆ ಸೂಚಿಸಿ, ಕೂಡಲೇ ಅಗತ್ಯವಾಗಿ ಬೇಕಿರುವ ಕಾಮಗಾರಿ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಕೊಡಿ. ಈ ಕುರಿತ ಪ್ರಸ್ತಾವನೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಕೆಲಸ ಸರಿಯಾಗಿ ಮಾಡೋಣ. ರೈತರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳೋಣ ಎಂದು ನಿರ್ದೇಶನ ನೀಡಿದರು. - ಮೂರ್ತಿ