ಮಡಿಕೇರಿ, ಆ. 19: ಪುಟ್ಟ ವಿಚಾರಕ್ಕಾಗಿ ಅಜ್ಜಿ ಬೈದರೆಂದು ಅಕ್ಕ-ಪಕ್ಕ ಮನೆಯ ಬಾಲೆಯರಿಬ್ಬರು, ಪುಟ್ಟ ಬಾಲಕನ ಸಹಿತ ಮನೆ ಬಿಟ್ಟು ಬೆಂಗಳೂರು ಬಸ್ ಏರುವ ಮೂಲಕ ತಪ್ಪಿಸಿಕೊಂಡು ಹೊರಟ ಪ್ರಸಂಗವೊಂದನ್ನು, ಸಕಾಲದಲ್ಲಿ ಪೊಲೀಸರು ಬೇಧಿಸಿದ್ದಾರೆ. ಗೋಣಿಕೊಪ್ಪಲು ಹಾಗೂ ಬೆಂಗಳೂರು ಬ್ಯಾಟರಾಯನಪುರ ಠಾಣೆಯ ಅಧಿಕಾರಿಗಳ ಸಕಾಲಿಕ ಕಾರ್ಯಾಚರಣೆಯಿಂದ ಈ ಮೂವರು ಮಕ್ಕಳು ಮರಳಿ ಪೋಷಕರ ವಶಕ್ಕೆ ಸೇರ್ಪಡೆಗೊಂಡಿದ್ದಾರೆ.ನಿನ್ನೆ ಬೆಳಿಗ್ಗೆ ಗೋಣಿಕೊಪ್ಪಲು ಪೊಲೀಸ್ ಠಾಣಾ ಸರಹದ್ದಿನ ಗ್ರಾಮವೊಂದರ, ಮನೆಯಲ್ಲಿ ಅಜ್ಜಿ ತನ್ನ ಹದಿನಾರರ ಹರೆಯದ ಮೊಮ್ಮಗಳಿಗೆ ‘ಕೆಲಸ ಮಾಡದೆ ಸೋಮಾರಿಯಾಗಿರುವೆ, ಸದಾ ಮೊಬೈಲ್‍ನಲ್ಲಿ ಕಾಲ ಕಳೆಯುವೆ’ ಎಂದು ಬೈದಿದ್ದಾರೆ. ಮೊದಲೇ ಹೆತ್ತವರಿಂದ ದೂರವಾಗಿ ಅಜ್ಜಿಯ ಆಸರೆಯಲ್ಲಿರುವ ಈ ಬಾಲೆ ಅಷ್ಟಕ್ಕೆ ಮುನಿಸಿಕೊಂಡಿದ್ದಾಳೆ. ಪಕ್ಕದ ಮನೆಯ ತನ್ನ ಗೆಳತಿ ಹದಿನೈದರ ಪೋರಿಯೊಂದಿಗೆ ಹಾಗೂ ತನ್ನ ತಮ್ಮ ಹನ್ನೆರಡರ ಪೋರನೊಂದಿಗೆ ಸೇರಿಕೊಂಡು, ಮನೆಯಿಂದ ಬಟ್ಟೆ ಇತ್ಯಾದಿ ಬ್ಯಾಗಿಗೆ ತುಂಬಿಕೊಂಡು ಜಾಗ ಖಾಲಿ ಮಾಡಿದ್ದಾರೆ.

ಆರು ಕಿ.ಮೀ. ದೂರದ ಗ್ರಾಮದಿಂದ ಗೋಣಿಕೊಪ್ಪಲುವಿಗೆ ತಲಪಿದ ಈ ಮೂವರು, ಅಲ್ಲಿನ ಮೊಬೈಲ್ ಅಂಗಡಿಯೊಂದರ ಪರಿಚಿತ ಹಾಗೂ ತಮ್ಮ ಸಂಬಂಧಿ ಬಳಿ ವೀರಾಜಪೇಟೆ ಅಥವಾ ನಾಪೋಕ್ಲುವಿಗೆ ಬಸ್ ಕುರಿತು ವಿಚಾರಿಸಿದ್ದಾರೆ. ಅಷ್ಟರಲ್ಲಿ ವೀರಾಜಪೇಟೆಗೆ ಹೊರಟ ಬಸ್‍ನಲ್ಲಿ ಗೋಣಿಕೊಪ್ಪಲುವಿನಿಂದ ತೆರಳಿದ್ದಾರೆ.

ವೀರಾಜಪೇಟೆಯಿಂದ ನೇರವಾಗಿ ಸಂಜೆ ಸುಮಾರು 4 ಗಂಟೆ ವೇಳೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್‍ನಲ್ಲಿ ಬೆಂಗಳೂರಿಗೆ ಹೊರಟಿದ್ದಾರೆ. ಈ ನಡುವೆ ಸಂಜೆ ಮನೆಯಲ್ಲಿ ಮೊಮ್ಮಗಳು ಹಾಗೂ ಮೊಮ್ಮಗ ಇಲ್ಲದಿರುವ ಬಗ್ಗೆ ಖಾತರಿ ಮಾಡಿಕೊಂಡ

(ಮೊದಲ ಪುಟದಿಂದ) ಅಜ್ಜಿ ಅಕ್ಕ - ಪಕ್ಕ ವಿಷಯ ತಿಳಿಯಲಾಗಿ; ಪಕ್ಕದ ಮನೆ ಹುಡುಗಿಯೂ ಕಾಣೆಯಾಗಿರುವದು ಖಾತರಿಯಾಗಿದೆ.

ಕೂಡಲೇ ನೆಂಟರಿಷ್ಟರು, ಪರಿಚಿತರ ಬಳಿ ವಿಷಯ ತಿಳಿಸಿ ಯಾವದೇ ಪ್ರಯೋಜನವಿಲ್ಲದೆ, ರಾತ್ರಿ 9 ಗಂಟೆ ಸುಮಾರಿಗೆ ಗೋಣಿಕೊಪ್ಪಲು ಠಾಣೆಗೆ ಬಂದು ದೂರು ನೀಡಿದ್ದಾರೆ. ಅಜ್ಜಿ ರಾಜಮ್ಮ ನೀಡಿದ ಪುಕಾರು ಮೇರೆಗೆ ದೂರು ದಾಖಲಿಸಿಕೊಂಡ ಠಾಣಾಧಿಕಾರಿ ಸುರೇಶ್ ಬೋಪಣ್ಣ ಮತ್ತು ಸಿಬ್ಬಂದಿ ಪಟ್ಟಣದಲ್ಲಿ ಹುಡುಕಾಟ ನಡೆಸಿದ್ದಾರೆ.

ಅಷ್ಟರಲ್ಲಿ ಪೊಲೀಸರ ಚಲನ - ವಲನ ಗಮನಿಸಿದ ಮೊಬೈಲ್ ಅಂಗಡಿಯ ಬಷೀರ್ ಅವರು ಠಾಣಾಧಿಕಾರಿ ಬಳಿ ಬಂದು ಏನೆಂದು ವಿಚಾರಿಸುತ್ತಾರೆ. ಆಗ ಮೂರು ಮಕ್ಕಳ ನಾಪತ್ತೆ ಕುರಿತು ಪ್ರಸ್ತಾಪಿಸಿದಾಗ, ಈತ ತನ್ನ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ತಪಾಸಣೆ ಮಾಡುತ್ತಾರೆ.

ಕ್ಯಾಮರಾ ಸುಳಿವು : ಈ ವೇಳೆ ಮಧ್ಯಾಹ್ನ ಸುಮಾರಿಗೆ ಮೂವರು ಮಕ್ಕಳು ಅಂಗಡಿಗೆ ಬಂದು, ಮೊಬೈಲ್ ಸರಿಪಡಿಸಿಕೊಂಡು ತೆರಳಿದ್ದು, ಖಾತರಿಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಹಾಗೂ ಡಿವೈಎಸ್‍ಪಿ ಜಯಕುಮಾರ್ ಅವರುಗಳ ಮಾರ್ಗದರ್ಶನ ಪಡೆಯುತ್ತಾರೆ.

ಅಲ್ಲದೆ ಇನ್ಸ್‍ಪೆಕ್ಟರ್ ರಾಮರೆಡ್ಡಿ ನೇತೃತ್ವದಲ್ಲಿ ಎಲ್ಲೆಡೆ ವಯರ್‍ಲೆಸ್ ಸಂದೇಶ ರವಾನಿಸಿ, ಮಕ್ಕಳ ಪತ್ತೆಗೆ ಬಲೆ ಬೀಸಿದ್ದಾರೆ. ಆ ವೇಳೆಗೆ ಓರ್ವ ಬಾಲೆ ಮೊಬೈಲ್ ಅಂಗಡಿಯ ಬಷೀರ್‍ಗೆ ಕರೆ ಮಾಡಿ, ತಾವು ಬೆಂಗಳೂರಿಗೆ ಹೋಗುತ್ತಿರುವದಾಗಿ ಸುಳಿವು ನೀಡಿದ್ದಾಳೆ. ಈ ಬಾಲೆ ಆಗಿಂದಾಗ ಮೊಬೈಲ್ ಶಾಪ್‍ಗೆ ತೆರಳುತ್ತಿರುವದರಿಂದ ಬಷೀರ್‍ನ ಮೊಬೈಲ್ ಸಂಖ್ಯೆ ಗೊತ್ತಿದ್ದು ಕರೆ ಮಾಡಿದ್ದಾಳೆ. ಆ ಕೂಡಲೇ ಬಷೀರ್ ಠಾಣಾಧಿಕಾರಿ ಸುರೇಶ್ ಬೋಪಣ್ಣ ಅವರಿಗೆ ಸುದ್ದಿ ಮುಟ್ಟಿಸಿದರು. ಸುರೇಶ್ ಬೋಪಣ್ಣ ಅವರು ಅದೇ ಸಂಖ್ಯೆಗೆ ಫೋನ್ ಮಾಡಿದಾಗ ಅದು ಆ ಬಸ್‍ನ ಕಂಡಕ್ಟರ್‍ದ್ದಾಗಿತ್ತು. ಆ ಬಾಲೆ ಕಂಡಕ್ಟರ್‍ನ ಫೋನ್ ಪಡೆದು ಕರೆ ಮಾಡಿದುದು ಗೊತ್ತಾಯಿತು. ಕಂಡಕ್ಟರ್ ಕುಮಾರ್ ಎಂಬವರೊಂದಿಗೆ ಎಸ್‍ಐ ಮಾತನಾಡಿದಾಗ ಇಬ್ಬರು ಬಾಲಕಿಯರು, ಓರ್ವ ಬಾಲಕ ಬಸ್‍ನಲ್ಲಿ ಪ್ರಯಾಣ ಮಾಡುತ್ತಿರುವದು ಖಾತರಿಗೊಂಡಿತು. ಈ ಫೋನ್ ಮಾತುಕತೆಯಾದಾಗ ರಾತ್ರಿ ಸುಮಾರು 10.30 ಗಂಟೆಯಾಗಿತ್ತು. ಕೂಡಲೇ ಸುರೇಶ್ ಬೋಪಣ್ಣ ಅವರು ಕಂಡಕ್ಟರ್ ಕುಮಾರ್‍ನೊಂದಿಗೆ ಆ ಮಕ್ಕಳನ್ನು ಬೆಂಗಳೂರು ಪೊಲೀಸರು ರಕ್ಷಿಸುತ್ತಾರೆ. ಸ್ಯಾಟ್‍ಲೈಟ್ ಬಸ್ ನಿಲ್ದಾಣದಲ್ಲಿ ಜಾಗೃತಿಯಿಂದ ಅವರನ್ನು ಒಪ್ಪಿಸಲು ಸೂಚಿಸುತ್ತಾರೆ.

ಬ್ಯಾಟರಾಯನಪುರಕ್ಕೆ ಸಂಪರ್ಕ: ಈ ಮಕ್ಕಳ ಮೇಲೆ ನಿಗಾವಹಿಸುವಂತೆ ಕಂಡಕ್ಟರ್ ಕುಮಾರ್‍ಗೆ ಸೂಚಿಸಿದ ಬಳಿಕ ಗೋಣಿಕೊಪ್ಪಲು ಠಾಣಾಧಿಕಾರಿ ಸುರೇಶ್ ಕುಮಾರ್ ಅವರು ಬ್ಯಾಟರಾಯನಪುರ ಠಾಣೆಯ ಎಎಸ್‍ಐ ಕೃಷ್ಣ ಎಂಬವರಿಗೆ ಸುದ್ದಿ ಮುಟ್ಟಿಸಿ, ಮಕ್ಕಳು ಬಸ್‍ನಿಂದ ಸ್ಯಾಟ್‍ಲೈಟ್ ನಿಲ್ದಾಣದಲ್ಲಿ ಇಳಿಯುವ ಮುನ್ನ ವಶಕ್ಕೆ ಪಡೆಯಲು ಕೋರುತ್ತಾರೆ.

ಸಕಾಲದಲ್ಲಿ ಅಲ್ಲಿನ ಪೊಲೀಸರು ಸ್ಪಂದಿಸಿ, ಈ ಮಕ್ಕಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಯೋಗಕ್ಷೇಮ ನೋಡಿಕೊಳ್ಳುತ್ತಾರೆ. ಇತ್ತ ಸುರೇಶ್ ಬೋಪಣ್ಣ ಗೋಣಿಕೊಪ್ಪಲುವಿನ ಪೊಲೀಸ್ ಸಿಬ್ಬಂದಿ ಅವಿನಾಶ್ ಅವರನ್ನು ರಾತ್ರಿ ಸುಮಾರು 1 ಗಂಟೆ ಹೊತ್ತಿಗೆ ಕಾರಿನಲ್ಲಿ ಬೆಂಗಳೂರಿಗೆ ಕಳುಹಿಸುತ್ತಾರೆ. ಅವರೊಂದಿಗೆ ಮಕ್ಕಳ ಸಂಬಂಧಿ ಅಶೋಕ್ ಅವರನ್ನೂ ಕಳುಹಿಸುತ್ತಾರೆ. ಪೊಲೀಸ್ ಕಾರ್ಯಾಚರಣೆಗೆ ಬೇಕಾದ ಸಮರ್ಪಕ ಮಾಹಿತಿಯನ್ನು ಜಿಲ್ಲಾ ವಯರ್‍ಲೆಸ್ ಕೇಂದ್ರದ ಗಿರೀಶ್ ಹಾಗೂ ಗೋಣಿಕೊಪ್ಪಲು ಠಾಣೆಯ ಮಣಿಕಂಠ ನೀಡುತ್ತಿರುತ್ತಾರೆ. ಈ ಮಕ್ಕಳನ್ನು ಇಂದು ಕಾರಿನಲ್ಲಿ ಕರೆತಂದು ಇಬ್ಬರು ಅಜ್ಜಿಯಂದಿರಿಗೆ ಒಪ್ಪಿಸಲಾಗಿದೆ.

ಸುಖಾಂತ್ಯ ಕಂಡಿತು : ತಡರಾತ್ರಿ ಬೆಂಗಳೂರು ತಲಪಿದ್ದ ಮಕ್ಕಳು ಮೊಬೈಲ್ ಅಂಗಡಿಯ ಬಷೀರ್ ನೀಡಿದ ಸುಳಿವಿನ ಮೇರೆಗೆ, ಮಕ್ಕಳ ಸಂಬಂಧಿ ಅಶೋಕ್ ಮತ್ತು ಪೊಲೀಸರ ಸಹಕಾರದಿಂದ ಪೋಷಕರ ವಶಕ್ಕೆ ಮರಳಿ ಕರೆತಂದು ಒಪ್ಪಿಸಲು ಸಾಧ್ಯವಾಗಿದೆ ಎಂದು ಗೋಣಿಕೊಪ್ಪಲು ಠಾಣಾಧಿಕಾರಿ ಸುರೇಶ್ ಬೋಪಣ್ಣ ನಿಟ್ಟುಸಿರು ಬಿಟ್ಟಿದ್ದಾರೆ. ಈ ಮಕ್ಕಳ ಪೈಕಿ ಇಬ್ಬರು ಬಾಲಕಿಯರಿದ್ದು, ಸಾಗರದಂತಿರುವ ಬೆಂಗಳೂರಿನ ಬಿಝಿ ಮಧ್ಯೆ ಸಿಲುಕಿಕೊಂಡಿದ್ದರೆ, ಈ ಮಕ್ಕಳ ಭವಿಷ್ಯ ಅಯೋಮಯವಾಗುತ್ತಿತ್ತು. ಎಸ್‍ಪಿ, ಡಿವೈಎಸ್‍ಪಿ ಮತ್ತು ಇನ್ಸ್‍ಪೆಕ್ಟರ್ ನಿರ್ದೇಶನದ ಮೇರೆ ತಕ್ಷಣ ಕ್ರಮಕೈಗೊಂಡುದರಿಂದ ಆ ಮಕ್ಕಳಿಗಾಗಬಹುದಾದ ದುರಂತವನ್ನು ತಪ್ಪಿಸಿದ ಬಗ್ಗೆ ತಮಗೆ ನೆಮ್ಮದಿಯಾಗಿದೆ ಎಂದು ಸುರೇಶ್ ಬೋಪಣ್ಣ ತಮ್ಮ ಮನದಾಳದ ಅನಿಸಿಕೆಯನ್ನು ಹಂಚಿಕೊಂಡರು.

ಗೋಣಿಕೊಪ್ಪಲು ಹಾಗೂ ಬ್ಯಾಟರಾಯನಪುರ ಪೊಲೀಸರ ಜಂಟಿ ಕಾರ್ಯಾಚರಣೆಯೊಂದಿಗೆ ಕ್ಷಿಪ್ರಗತಿಯಲ್ಲಿ ಮೂವರು ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯ ಕಾಣುವಂತಾಗಿದೆ ಎಂದು ಡಿವೈಎಸ್‍ಪಿ ಜಯಕುಮಾರ್ ‘ಶಕ್ತಿ’ಯೊಂದಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಎಸ್‍ಪಿ ಕ್ಷಮಾಮಿಶ್ರಾ, ಗೋಣಿಕೊಪ್ಪಲು ಪೊಲೀಸರ ಸಫಲ ಪ್ರಯತ್ನಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.