ಮಡಿಕೇರಿ, ಆ. 19: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆಯನ್ನು ಕೇವಲ ಮನೆ ಹಾಗೂ ದೇವಾಲಯಗಳಿಗೆ ಸೀಮಿತಗೊಳಿಸಿ ಆದೇಶ ಹೊರಡಿಸಿದ್ದ ಸರ್ಕಾರ ಇದೀಗ ತನ್ನ ಆದೇಶದಲ್ಲಿ ಮಾರ್ಪಾಡು ಮಾಡಿದ್ದು, ದೇವಾಲಯಗಳು, ಮನೆಗಳು, ಮಾತ್ರವಲ್ಲದೆ, ಖಾಸಗಿ ಸ್ಥಳ ಹಾಗೂ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲು ಅವಕಾಶ ನೀಡಿದೆ. ಇದರಿಂದ ಇದುವರೆಗೂ ಗೊಂದಲದಲ್ಲಿದ್ದ ಖಾಸಗಿ ಸ್ಥಳಗಳಲ್ಲಿ ಉತ್ಸವ ಆಚರಿಸುತ್ತಿದ್ದ ಉತ್ಸವ ಸಮಿತಿಗಳು ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಸರಳ ಉತ್ಸವ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಆದರೆ, ಪ್ರತಿಷ್ಠಾಪನೆ ಸ್ಥಳದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ, ಮೆರವಣಿಗೆ ಸಹಿತ ವಿಸರ್ಜನೆಗೆ ನಿರ್ಬಂಧ ಹೇರಲಾಗಿದ್ದು, ಮೆರವಣಿಗೆ ರಹಿತವಾಗಿ

(ಮೊದಲ ಪುಟದಿಂದ) ವಿಸರ್ಜನೆ ನೆರವೇರಿಸಲು ಸೂಚಿಸಿದೆ. ಖಾಸಗಿ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡುವ ವೇಳೆ ಸ್ಥಳದ ಮಾಲೀಕರ ಅನುಮತಿ, ವಿದ್ಯುತ್ ಇಲಾಖೆ, ಸ್ಥಳೀಯ ಪಂಚಾಯಿತಿ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಿದೆ. ಮನೆಗಳಲ್ಲಿ 2 ಅಡಿ, ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರದ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬಹುದಾಗಿದೆ.

ದಿನಗಳ ನಿರ್ಬಂಧವಿಲ್ಲ

ಈ ನಡುವೆ ಕೊಡಗಿನಲ್ಲಿ ಗಣಪತಿ ಆರಾಧನೆ ಸಂಬಂಧ ಇಂತಿಷ್ಟು ದಿನ ಮಾತ್ರ ಆಚರಿಸಬೇಕು ಎಂಬ ಷರತ್ತನ್ನು ನಿನ್ನೆ ದಿನ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ವಿಧಿಸಿಲ್ಲ. ಸಮಿತಿಗಳು ಎಷ್ಟು ದಿನವಾದರೂ ಉತ್ಸವ ಆಚರಿಸಬಹುದಾಗಿದೆ. ಆದರೆ, ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಗಣಪತಿ ವಿಸರ್ಜನೆಯನ್ನು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯೊಳಗಾಗಿ ಕಡ್ಡಾಯವಾಗಿ ಮಾಡಿ ಮುಗಿಸಬೇಕು ಎಂದು ಸೂಚಿಸಲಾಗಿದೆ. ಉಳಿದಂತೆ ಹೆಚ್ಚಿನ ಜನ ಸೇರುವಂತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಪ್ರತಿಷ್ಠಾಪನಾ ಸ್ಥಳದಲ್ಲಿ ಸ್ಯಾನಿಟೈಸಿಂಗ್, ಭಕ್ತಾದಿಗಳು ಮಾಸ್ಕ್ ಧರಿಸುವುದು ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸುವಂತೆಯೂ ನಿರ್ದೇಶನ ನೀಡಲಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸುಮಾರು ಮೂವತ್ತು ಕಡೆಗಳಲ್ಲಿ ಗಣೇಶೋತ್ಸವ ಆಚರಣೆ ನಡೆಯಲಿದ್ದು, ಎಲ್ಲಾ ಉತ್ಸವ ಸಮಿತಿಗಳಿಗೂ ಸರ್ಕಾರದ ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಲಾಗಿದೆ. ನಗರದ ಗೌರಿಕೆರೆಯಲ್ಲಿ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ.

ಸೋಮವಾರಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪ.ಪಂ. ವಾಣಿಜ್ಯ ಸಂಕೀರ್ಣದಲ್ಲಿ ಸಾರ್ವಜನಿಕ ಗಣಪತಿ ಸೇವಾ ಸಮಿತಿ ವತಿಯಿಂದ ಉತ್ಸವಕ್ಕೆ ಸಿದ್ಧತೆ ನಡೆದಿದ್ದು, ಪಟ್ಟಣ ವ್ಯಾಪ್ತಿಯ ವಿವಿಧ ದೇವಾಲಯ ಹಾಗೂ ಗ್ರಾಮಗಳಲ್ಲಿ ಆರಾಧನೆ ನಡೆಯಲಿದೆ. ಆನೆಕೆರೆಯಲ್ಲಿ ವಿಸರ್ಜನೆಗೆ ಅವಕಾಶ ನೀಡಲಾಗಿದೆ.

ವೀರಾಜಪೇಟೆ

ವೀರಾಜಪೇಟೆಯ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ 21 ಗೌರಿ-ಗಣೇಶ ಉತ್ಸವ ಸಮಿತಿಗಳು ಕೊರೊನಾ ಸಂಬಂಧ ಸರಕಾರದ ಷರತ್ತು ಪಾಲನೆಯೊಂದಿಗೆ ಸರಳವಾಗಿ ಗೌರಿ-ಗಣೇಶೋತ್ಸವ ಆಚರಿಸಲು ನಿರ್ಧರಿಸಿರುವುದಾಗಿ ವೀರಾಜಪೇಟೆಯ ಐತಿಹಾಸಿಕ ನಾಡಹಬ್ಬ ಗೌರಿ-ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಜಿ.ಸಾಯಿನಾಥ್ ತಿಳಿಸಿದ್ದಾರೆ.

21 ಉತ್ಸವ ಸಮಿತಿಗಳು ಒಂದೇ ದಿನ ಪ್ರತಿಷ್ಠಾಪನೆ ನೆರವೇರಿಸಿದರೂ, ಮೂರ್ತಿಗಳ ವಿಸರ್ಜನೋತ್ಸವ ಮಾತ್ರ ಉತ್ಸವ ಸಮಿತಿಗಳ ಆಸಕ್ತಿಯಂತೆ ವಿವಿಧ ದಿನಗಳಲ್ಲಿ ಇಲ್ಲಿನ ಖಾಸಗಿ ಬಸ್ಸು ನಿಲ್ದಾಣದ ಬಳಿಯಿರುವ ಗೌರಿಕೆರೆಯಲ್ಲಿ ನಡೆಯಲಿದೆ. ದೇವಾಲಯಗಳಲ್ಲಿ ಪ್ರತಿಷ್ಠಾಪಿಸುವ ಸುಮಾರು ಎಂಟು ಸಮಿತಿಗಳು ಸೆಪೆÀ್ಟಂಬರ್ 1ರಂದು ವಿವಿಧ ಶುಭ ಸಮಯಗಳಲ್ಲಿ ಮೂರ್ತಿಗಳ ವಿಸರ್ಜನೆ ಮಾಡಲಿವೆÉ. ಉಳಿದ 13 ಉತ್ಸವ ಸಮಿತಿಗಳು ಅನುಕೂಲಕ್ಕೆ ತಕ್ಕಂತೆ ವಿಧಿ ವಿಧಾನಗಳೊಂದಿಗೆ ಕೆಲವರು 5 ದಿನಗಳಲ್ಲಿ ಇನ್ನು ಕೆಲವರು 9ದಿನಗಳಲ್ಲಿ ಮೂರ್ತಿಗಳ ವಿಸರ್ಜನೋತ್ಸವಕ್ಕೆ ಆಸಕ್ತಿ ತೋರಿದ್ದಾರೆ. ಹಲವು ಉತ್ಸವ ಸಮಿತಿಗಳಿಗೆ ದೇವಾಲಯದ ಸೌಲಭ್ಯಗಳಿಲ್ಲದಿದ್ದರೂ ಆಯ್ದ ಸ್ಥಳಗಳಲ್ಲಿ ಉತ್ಸವ ಆಚರಣೆಗೆ ಸರ್ಕಾರ ಅವಕಾಶ ನೀಡಿರುವುದು ಉತ್ತಮ ಬೆಳವಣಿಗೆ ಎಂದು ಸಾಯಿನಾಥ್ ಅಭಿಪ್ರಾಯಿಸಿದ್ದಾರೆ.