ಚೆಟ್ಟಳ್ಳಿ, ಆ. 19: ಕೊಡಗಿನ ಮಳೆಗಾಲ ಪ್ರಾರಂಭವಾದೊಡನೆ ಸುರಿಯುವ ಮಳೆಯ ನಡುವೆ ಮೈಯೊಡ್ಡಿ ಉಕ್ಕಿಹರಿಯುವ ನದಿಯನಡುವೆ ತೇಲಾಡುತ್ತಾ.. ಏಳುತ್ತಾ... ಬೀಳುತ್ತಾ... ಸಾಹಸಮಯ ರಿವರ್ ರ್ಯಾಫ್ಟಿಂಗ್‍ನಂತ ಜಲಕ್ರೀಡೆಗೆ ಈ ವರ್ಷದ ಕೊರೊನಾ ಅಡ್ಡಿಯಾಗಿದೆ.

ಸುಮಾರು 10 ವರ್ಷಗಳ ಹಿಂದೆ ಬಿಟ್ಟಂಗಾಲದ ಕೂರ್ಗ್ ಅಡ್ವೆಂಚರ್ ಕ್ಲಬ್ ಕುಶಾಲನಗರ ಸಮೀಪದ ದುಬಾರೆ ಹೊಳೆಯಲ್ಲಿ ರಿವರ್ ರ್ಯಾಫ್ಟಿಂಗ್ ನಡೆಸಿದ್ದಾಗ ಜಂಗಲ್ ಲಾಡ್ಜ್‍ನ ಸಹಕಾರವೂ ದೊರಕಿತು. ಆರಂಭದಲ್ಲಿ ಹಲವು ವರ್ಷಗಳವರೆಗೆ ಪ್ರಚಾರದ ಕೊರತೆ ಹಾಗೂ ಹಲವು ಮತ್ತಿತರ ಕಾರಣಗಳಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ. ನಂತರದಲ್ಲಿ ಕೊಡಗಿನಲ್ಲಿ ನಡೆಯುವ ವೈಟ್‍ವಾಟರ್ ರ್ಯಾಫ್ಟಿಂಗ್ ಬಾರೀ ಪ್ರಚಾರಗೊಳ್ಳತೊಡಗಿತು. ಪ್ರಾರಂಭದ ವರ್ಷದಲ್ಲಿ ನೂರಾರು ಪ್ರವಾಸಿಗರು ಜಲಕ್ರೀಡೆಯಲ್ಲಿ ತೊಡಗಿಸಿಕೊಂಡರು ವರ್ಷದಿಂದ ವರ್ಷಕ್ಕೆ ಸಾವಿರಗಟ್ಟಲೆ ಪ್ರವಾಸಿಗರು ಬರತೊಡಗಿದರು.

ದುಬಾರೆಯಲ್ಲಿನ ಜಲಕ್ರೀಡೆಗೆ ಹೋಲಿಸಿದರೆ ದಕ್ಷಿಣ ಕೊಡಗಿನ ಕೆಕೆಆರ್‍ನ ಬರಪೊಳೆಯ ಜಲಕ್ರೀಡೆ ಅದ್ಭುತ ಹಾಗೂ ರೋಚಕ ಅನುಭವವೆಂದು ಜಲ ಕ್ರೀಡಾ ಪ್ರೇಮಿಗಳು ಹೇಳುತ್ತಾರೆ.

ಕೊರೊನಾ ಎಲ್ಲೆಡೆ ಆವರಿಸಿದ ಪರಿಣಾಮ ಕೊಡಗಿನ ಜಲಕ್ರೀಡೆಗೆ ಕಂಟಕವಾದಂತಾಗಿದೆ. ಮಳೆಗಾಲ ಪ್ರಾರಂಭವಾದೊಡನೆ ಕೊಡಗಿನ ಅಲ್ಲಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟಗಳ ನಡುವೆ ದುಬಾರೆ ಹಾಗೂ ಕೆಕೆಆರ್‍ನ ರೋಚಕ ಜಲಕ್ರೀಡೆಗೆ ಆಯೋಜಕರು ಸೂಕ್ತ ದಾಖಲೆಗಳನ್ನೆಲ್ಲ ಜೋಡಿಸಿ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯುವರು. ರ್ಯಾಫ್ಟಿಂಗೆ ಬೇಕಾದ ರ್ಯಾಫ್ಟಿಂಗ್ ಬೋಟ್‍ನಿಂದ ಹಿಡಿದು ಹಲವು ರಕ್ಷಣಾ ಸಾಮಗ್ರಿಗಳನ್ನೆಲ್ಲ ಜೋಡಿಸಿ ನೇಪಾಳ ಹಾಗೂ ಉತ್ತರ ಭಾರತದ ನುರಿತ ರ್ಯಾಫ್ಟರ್‍ಗಳೊಂದಿಗೆ ರ್ಯಾಫ್ಟಿಂಗ್ ಕ್ರೀಡೆಯನ್ನು ಪ್ರಾರಂಭಿಸುತಿದ್ದರು. ಈ ವರ್ಷದ ಕೊರೊನಾದ ಪರಿಸ್ಥಿತಿ ಇಂದಾಗಿ ಯಾವುದೇ ಆಯೋಜಕರು ರ್ಯಾಫ್ಟಿಂಗ್ ಕ್ರೀಡೆ ನಡೆಸಲು ಅನುಮತಿ ಪಡೆಯಲು ಮುಂದಾಗಲಿಲ್ಲ. ಈ ಹಿಂದೆ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಖರೀದಿಸಿದ ರ್ಯಾಫ್ಟಿಂಗ್ ಸಾಮಗ್ರಿಗಳು ಈ ವರ್ಷ ಜಲಕ್ರೀಡೆ ನಡೆಸಲಾಗದೆ ಹಾಳಾಗಲಿದೆಯೆಂದು ಆಯೋಜಕರು ಹೇಳುತ್ತಾರೆ. ಕೊಡಗಿನ ಮಳೆಗಾಲದಲ್ಲಿ ಪ್ರಾರಂಭವಾಗಬೇಕಿದ್ದ ವಾಟರ್ ರ್ಯಾಫ್ಟಿಂಗ್ ಎಂಬ ಜಲಕ್ರೀಡೆ ಕೊರೊನಾ ಕಂಟಕ ವಾದಂತಾಗಿ ದೆಂದು ಕೆಕೆಆರ್ ಜಲ ಕ್ರೀಡೆಯ ಆಯೋಜಕ ಕುಂಞಂಗಡ ಬೋಸ್ ಮಾದಪ್ಪ ಹೇಳುತ್ತಾರೆ.

- ಪುತ್ತರಿರ ಕರುಣ್ ಕಾಳಯ್ಯ