ಸೋಮವಾರಪೇಟೆ, ಆ. 19: ಪ್ರತಿವರ್ಷವೂ ಅದ್ದೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದ್ದ ಸ್ವರ್ಣಗೌರಿ ಹೊನ್ನಮ್ಮನ ಕೆರೆ ಜಾತ್ರಾ ಮಹೋತ್ಸವವನ್ನು ಪ್ರಸಕ್ತ ವರ್ಷ ಕೋವಿಡ್ 19 ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಶ್ರೀ ಬಸವೇಶ್ವರ ಮತ್ತು ಸ್ವರ್ಣಗೌರಿ ಹೊನ್ನಮ್ಮತಾಯಿ ಸೇವಾ ಸಮಿತಿ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಮಿತಿಯ ಅಧ್ಯಕ್ಷ ಡಿ.ವಿ. ಯೋಗೇಶ್, ಈ ಭಾರಿ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆಯಲ್ಲಿ ಗೌರಿ ಹಬ್ಬದಂದು ಜಾತ್ರಾ ಮಹೋತ್ಸವ ಇರುವುದಿಲ್ಲ. ಹಬ್ಬದ ದಿನದಂದು ಸಾರ್ವಜನಿಕರಿಗೆ ದೇವಾಲಯ ಪ್ರವೇಶವನ್ನೂ ರದ್ದುಗೊಳಿಸಲಾಗಿದೆ ಎಂದರು.

ಗೌರಿ ಹಬ್ಬವಾದ ತಾ. 21 ರಂದು ಹೊನ್ನಮ್ಮತಾಯಿಯ ಕುಟುಂಬಸ್ಥರು ಹಾಗೂ ದೇವಾಲಯ ಸಮಿತಿ ಸದಸ್ಯರುಗಳು ವಿಶೇಷ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಅಂದು ಬೆಳಿಗ್ಗೆ 9.30ಕ್ಕೆ ಹೊನ್ನಮ್ಮನಕೆರೆಗೆ ಬಾಗಿನ ಅರ್ಪಿಸಲಾಗುವದು ಎಂದು ಮಾಹಿತಿ ನೀಡಿದರು.

ಇದರೊಂದಿಗೆ ಗವಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನೂ ನಿರ್ಬಂಧಿಸಲಾಗುವದು ಎಂದರು. ಗೋಷ್ಠಿಯಲ್ಲಿ ದೇವಾಲಯ ಸಮಿತಿ ಕಾರ್ಯದರ್ಶಿ ಡಿ.ವಿ. ಚಂದ್ರಶೇಖರ್, ಸದಸ್ಯರಾದ ಡಿ.ವಿ. ಹರ್ಷಿತ್, ಡಿ.ಬಿ. ಲೋಕೇಶ್, ಡಿ.ಕೆ. ಪವನ್ ಉಪಸ್ಥಿತರಿದ್ದರು.