ಕಣಿವೆ, ಆ. 18 : ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುವೆಂಪು ಬಡಾವಣೆಯ ಕಾವೇರಿ ನದಿ ದಂಡೆಯಲ್ಲಿ ಪ್ರವಾಹದ ಬಳಿಕ ನದಿ ದಂಡೆ ಕುಸಿಯುತ್ತಿದ್ದು, ಬಡಾವಣೆಯ ನಿವಾಸಿಗಳಲ್ಲಿ ಆತಂಕ ಉಂಟಾಗಿದೆ. ಈ ಸಂಬಂಧ ಬಡಾವಣೆಯ ಹಿತರಕ್ಷಣಾ ಸಮಿತಿ ಮಂಗಳವಾರ ಸಭೆ ನಡೆಸಿದ್ದು ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಇಲ್ಲಿಗೆ ಬಂದು ಪರಿಸ್ಥಿತಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಬಡಾವಣೆಯ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಪಂಡ ಕಾವೇರಪ್ಪ, ಕಳೆದ ಮೂರು ವರ್ಷಗಳಿಂದಲೂ ಸತತವಾಗಿ ಬರುತ್ತಿರುವ ಕಾವೇರಿ ನದಿಯ ಪ್ರವಾಹದಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ. ಬಡಾವಣೆಯಲ್ಲಿ ಜಲಮಂಡಳಿ ವತಿಯಿಂದ ಅಳವಡಿಸಿದ ಒಳಚರಂಡಿ ಪೈಪ್ ಲೈನ್ ಕಾಮಗಾರಿ ಅವೈಜ್ಞಾನಿಕವಾಗಿರುವುದರಿಂದಲೇ ನಮಗೆ ಹೆಚ್ವು ಅನಾನುಕೂಲ ಉಂಟಾಗಿದೆ. ಒಳಚರಂಡಿ ಮಂಡಳಿ ಪೈಪ್ಲೈನ್ ಮಾರ್ಗದ ಉದ್ದಕ್ಕೂ ರಸ್ತೆಗಳು ಪೂರ್ಣ ಗುಂಡಿ ಬಿದ್ದು ಹಾಳಾಗಿವೆ.
ನದಿಯಂಚಿನಲ್ಲಿ ಇಡೀ ಊರಿನ ಒಳಚರಂಡಿ ಕಾಮಗಾರಿ ಮಾಡಿದ್ದರ ಫಲ ನದಿ ದಂಡೆ ಉದ್ದಕ್ಕೂ ಕುಸಿದಿದೆ. ಇದರಿಂದಾಗಿ ನದಿಯಂಚಿನಲ್ಲಿ ವಾಸಿಸುತ್ತಿರುವವರಿಗೆ ಜೀವ ಭಯ ಆರಂಭವಾಗಿದೆ. ನಾವುಗಳು ನದಿ ದಂಡೆಯ ಭಾಗವನ್ನು ಅತಿಕ್ರಮಿಸಿಲ್ಲ. ಇಲ್ಲವೇ ಅನಧಿಕೃತವಾಗಿ ಯಾರೂ ಕೂಡ ಮನೆಗಳನ್ನು ಕಟ್ಟಿಲ್ಲ. ಜಿಲ್ಲಾಧಿಕಾರಿ ಅನುಮೋದಿಸಿದ ಅಧಿಕೃತ ಬಡಾವಣೆಗಳಲ್ಲಿಯೇ ನಾವು ಮನೆಗಳನ್ನು ಕಟ್ಟಿಕೊಂಡಿದ್ದೇವೆ. ಕೂಡಲೇ ಜಿಲ್ಲಾಡಳಿತ ಹಾಗೂ ಸರ್ಕಾರ ನಮ್ಮ ಬಡಾವಣೆಯ ಸಮಸ್ಯೆಗಳನ್ನು ಅರಿತು ಶಾಶ್ವತವಾದ ತಡೆಗೋಡೆಯನ್ನು ನಿರ್ಮಿಸಿ ಪ್ರವಾಹ ಬಾರದಂತೆ ದೂರಾಲೋಚನೆಯ ಕ್ರಮ ಕೈಗೊಳ್ಳಬೇಕು.
ಸೆಪ್ಟೆಂಬರ್ ಹತ್ತರೊಳಗೆ ಉಸ್ತುವಾರಿ ಸಚಿವರು ಅಥವಾ ಶಾಸಕರು ಸ್ಥಳಕ್ಕೆ ಬಂದು ಇಲ್ಲಿನ ಸಮಸ್ಯೆ ಪರಿಶೀಲಿಸದಿದ್ದರೆ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಲ್ಲದೇ ಮುಖ್ಯ ರಸ್ತೆಯಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕಾವೇರಪ್ಪ ಎಚ್ಚರಿಸಿದರು. ಬಡಾವಣೆಯ ನಿವಾಸಿ ನಂಜುಂಡಸ್ವಾಮಿ ಎಂಬವರಿಗೆ ಸೇರಿದ ಮನೆಯೊಳಗಿನ ಗೋಡೆಯೊಂದು ಪ್ರವಾಹಕ್ಕೆ ಸಿಲುಕಿ ಕುಸಿದು ಬಿದ್ದಿದೆ. ಇದೇ ರೀತಿ ಹಲವು ಮನೆಗಳ ಕಾಪೌಂಡ್ ಗೋಡೆಗಳು ಬೀಳುತ್ತಿವೆ. ಕಳೆದ ಮೂರು ವರ್ಷಗಳಿಂದ ಪ್ರವಾಹದ ನೀರು ಬಡಾವಣೆಯಲ್ಲಿ ನಿಂತು ಹರಿದು ರಸ್ತೆಗಳು ಕಿತ್ತು ಹೋಗಿದ್ದರೂ ಕೂಡ ಮೂರು ವರ್ಷಗಳಿಂದ ಒಂದೇ ಒಂದು ರಸ್ತೆ ಕಾಮಗಾರಿ ನಡೆಸದ ಜಿಲ್ಲಾಡಳಿತದ ವಿರುದ್ಧ ಸಮಿತಿ ಉಪಾಧ್ಯಕ್ಷರೂ ಆದ ನಿವೃತ್ತ ಯೋಧ ಆಮೆಜನಾರ್ಧನ್ ಬೇಸರ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವರು ಬಂದು ಪ್ರವಾಹ ತಂದಿಟ್ಟ ವಾಸ್ತವತೆ ಅರಿಯಬೇಕು ಎಂದು ಮತ್ತೋರ್ವ ನಿವಾಸಿ ಚಂದ್ರಶೇಖರ್ ಒತ್ತಾಯಿಸಿದರು. ಕಾವೇರಿ ನದಿಯಲ್ಲಿ ಹೂಳು ತೆಗೆಯುವ ಬದಲು ಈ ವ್ಯಾಪ್ತಿಯ ಶಾಶ್ವತವಾದ ತಡೆಗೋಡೆ ನಿರ್ಮಿಸಲು ಶಾಸಕರು ಮುಂದಾಗಬೇಕೆಂದು ಸಮಿತಿ ಕಾರ್ಯದರ್ಶಿ ಸವಿತಾ ಕೃಷ್ಣಪ್ಪ ಹಾಗು ಪಾರ್ವತಿ ಹೇಳಿದರು. ಈ ಸಂದರ್ಭ ಬಡಾವಣೆ ನಿವಾಸಿಗಳಾದ ಸುಗುಣ, ರಮೇಶ, ಜಿತೇಂದ್ರ, ಎಸ್.ಆರ್. ಮಾದಪ್ಪ, ದಯಾನಂದ ಮೊದಲಾದವರಿದ್ದರು. -ಮೂರ್ತಿ