ಸೋಮವಾರಪೇಟೆ, ಆ. 18: ರೈತರು ಬೆಳೆದಿರುವ ವಿವಿಧ ಬೆಳೆಗಳನ್ನು ಆ್ಯಪ್ ಮೂಲಕ ಸಮೀಕ್ಷೆ ನಡೆಸುವ ಬಗ್ಗೆ ಅನುಸರಿಸಬೇಕಾದ ಕ್ರಮಗಳ ಕುರಿತು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಹೊರಗುತ್ತಿಗೆಯ ಸಂಪನ್ಮೂಲ ವ್ಯಕ್ತಿಗಳಿಗೆ ಇಲ್ಲಿನ ಪ.ಪಂ. ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು.
ಜಿ.ಪಂ., ಕೃಷಿ ಇಲಾಖೆಯ ಆತ್ಮ ಯೋಜನೆ-2020-21ರ ಮೂಲಕ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಬೆಳೆ ಸಮೀಕ್ಷೆಯ ಬಗ್ಗೆ ಅಧಿಕಾರಿಗಳು ಮತ್ತು ವಿವಿಧ ಇಲಾಖೆಯ ಸಿಬ್ಬಂದಿಗಳಿಗೆ ಸಂಪೂರ್ಣ ಮಾಹಿತಿ ಒದಗಿಸಲಾಯಿತು.
ತೋಟಗಾರಿಕಾ ಬೆಳೆಗಳು ಹಾನಿಗೀಡಾದರೆ ತೋಟಗಾರಿಕೆ ಇಲಾಖೆ, ಕೃಷಿ ಬೆಳೆಗಳು ಹಾನಿಗೀಡಾದರೆ ಕೃಷಿ ಇಲಾಖೆ ಹೀಗೆ ಸಂಬಂಧಿಸಿದ ಇಲಾಖೆಗೆ ಪರಿಹಾರದ ಅರ್ಜಿ ಸಲ್ಲಿಸಬೇಕು. ಎಲ್ಲಾ ಅರ್ಜಿಗಳನ್ನು ತಾಲೂಕು ಕಚೇರಿಗೆ ಸಲ್ಲಿಸಿದರೆ, ಅವುಗಳನ್ನು ವಿಂಗಡಿಸಿ ನಂತರ ಸಂಬಂಧಿಸಿದ ಇಲಾಖೆಗೆ ವರ್ಗಾಯಿಸಲು ವಿಳಂಬವಾಗಲಿದೆ ಎಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿದರು.
ಕಾಫಿ ಬೆಳೆಹಾನಿಗೆ ಸಂಬಂಧಿಸಿದ ಪರಿಹಾರಕ್ಕೆ ಅರ್ಜಿ ಸ್ವೀಕರಿಸಲು ಕಾಫಿ ಮಂಡಳಿಯಲ್ಲಿ ಅವಕಾಶವಿಲ್ಲ. ಈ ಹಿನ್ನೆಲೆ ಕಾಫಿಬೆಳೆ ಹಾನಿ ಸಂಬಂಧಿತ ಅರ್ಜಿಗಳನ್ನು ಕಂದಾಯ ಇಲಾಖೆಗೆ ಸಲ್ಲಿಸಬಹುದು ಎಂದು ಗೋವಿಂದರಾಜು ಮಾಹಿತಿ ನೀಡಿದರು.
ಮೊದಲಿಗೆ ಬೆಳೆಹಾನಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸಿ, ನಂತರ ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು ಒಳಗೊಂಡಂತೆ ತಂಡ ರಚಿಸಿ ಜಂಟಿ ಸರ್ವೆ ಮಾಡಲಾಗುವದು. ಕಾಫಿಗೆ ಸಂಬಂಧಿಸಿದಂತೆ ಪರಿಹಾರದ ಮಾರ್ಗಸೂಚಿಯನ್ನು ಸರ್ಕಾರ ಇನ್ನೂ ಬಿಡುಗಡೆಗೊಳಿಸಿಲ್ಲ. ಆದರೂ ಅರ್ಜಿ ಸಲ್ಲಿಸಿದರೆ ಸ್ವೀಕರಿಸಿ ಎಂದು ಸಭೆಯಲ್ಲಿದ್ದ ಸಿಬ್ಬಂದಿಗಳಿಗೆ ಸೂಚಿಸಿದರು.
ಪ್ರಸ್ತುತ ಅರ್ಧ ಮಳೆಗಾಲವಷ್ಟೇ ಮುಗಿದಿದ್ದು, ಈಗಲೇ ಬೆಳೆಹಾನಿಯ ಬಗ್ಗೆ ನಿಖರ ವರದಿ ನೀಡಲು ಸಾಧ್ಯವಿಲ್ಲ. ಆದರೆ ಭೂಕುಸಿತದಂತಹ ಪ್ರಕರಣಗಳಿಗೆ ತುರ್ತು ಸ್ಪಂದಿಸಬೇಕಿದೆ. ಪ್ರಸ್ತುತ ಕಾಫಿಗೆ ಹೆಚ್ಚು ಹಾನಿಯಾಗಿಲ್ಲ. ಶೀತಮಯ ವಾತಾವರಣ ಇರುವದರಿಂದ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ ಹಾನಿಯ ಪ್ರಮಾಣ ಹೆಚ್ಚಲಿದೆ ಎಂದು ಕಾಫಿ ಮಂಡಳಿಯ ಅಧಿಕಾರಿ ಲಕ್ಷ್ಮಿಕಾಂತ್ ಹೇಳಿದರು.
ಒಂದು ಸರ್ವೆ ನಂಬರ್ ಸಮೀಕ್ಷೆ ಮಾಡಿದರೆ ಪಿ.ಆರ್.ಗಳಿಗೆ 10 ರೂಪಾಯಿ, ಹೆಚ್ಚುವರಿ ಬೆಳೆಗಳನ್ನು ಸರ್ವೆ ಮಾಡಿದರೆ 5 ರೂಪಾಯಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ್ ತಿಳಿಸಿದರು. ಕಳೆದ ವರ್ಷದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಕೆಲ ಸಿಬ್ಬಂದಿಗಳಿಗೆ ಇಂದಿಗೂ ಹಣ ಬಂದಿಲ್ಲ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು.
ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಹಣ ಬಿಡುಗಡೆಗೆ ಕ್ರಮವಹಿಸುವದಾಗಿ ತಹಶೀಲ್ದಾರ್ ಹೇಳಿದರು. ಬೆಳೆ ಸಮೀಕ್ಷೆಗೆ ತೆರಳುವ ಸಂದರ್ಭ ವಾಸ್ತವಾಂಶವನ್ನು ಅಪ್ಲೋಡ್ ಮಾಡಬೇಕು. ಆದಷ್ಟು ಶೀಘ್ರವಾಗಿ ಸಮೀಕ್ಷೆಯನ್ನು ಪೂರ್ಣಗೊಳಿಸುವಂತೆ ಗೋವಿಂದರಾಜು ಸೂಚಿಸಿದರು.
ನಂತರ ಆ್ಯಪ್ ಮೂಲಕ ಸಮೀಕ್ಷೆ ನಡೆಸುವ ಬಗ್ಗೆ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಅಮರೇಶ್, ಪಲ್ಲವಿ, ಅರುಣ್ ಅವರುಗಳು ಮಾಹಿತಿ ನೀಡಿದರು. ಸಭೆಯಲ್ಲಿ ಕೃಷಿ ಇಲಾಖೆಯ ಮುಕುಂದ, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಅವರುಗಳು ಉಪಸ್ಥಿತರಿದ್ದರು.