ಕೂಡಿಗೆ, ಆ. 18: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಅಟ್ಟಹಾಸದಿಂದಾಗಿ ಈ ವ್ಯಾಪ್ತಿಯ 20 ಕ್ಕೂ ಹೆಚ್ಚು ರೈತರ ಬೆಳೆ ಸಂಪೂರ್ಣ ನಾಶಗೊಂಡಿವೆ. ಕಳೆದ ಎರಡು ದಿನಗಳ ಹಿಂದಿ ಭತ್ತದ ನಾಟಿ ಮಾಡಿದ ಗದ್ದೆಗಳು ಸೇರಿದಂತೆ ಈ ಭಾಗದ ಬಾಳೆ, ಕೆಸ, ಕೇನೆ, ಸಿಹಿ ಗೆಣಸು, ಶುಂಠಿ ಬೆಳೆಗಳನ್ನು ಕಾಡಾನೆಗಳು ಮನಬಂದಂತೆ ತಿಂದು ತುಳಿದು ಭಾರೀ ನಷ್ಟಪಡಿಸಿವೆ.
ಆನೆಕಾಡಿನಿಂದ ಕಳೆದ ಬೇಸಿಗೆ ಸಮಯದಲ್ಲಿ ಬಂದ ಕಾಡಾನೆಗಳ ಗುಂಪು ನಾಡಿನಲ್ಲೇ ಬೀಡುಬಿಟ್ಟಿವೆ. ಈ ಆನೆಗಳ ಹಿಂಡು ಎರಡು ಭಾಗಗಳಾಗಿ ಬೆಂಡೆಬೆಟ್ಟ ವ್ಯಾಪ್ತಿಯಲ್ಲಿ ಇರುವುದು ಕಂಡುಬರುತ್ತದೆ. ಬೆಂಡೆಬೆಟ್ಟದಿಂದ ಹಾರಂಗಿ ನದಿಯನ್ನು ದಾಟಿ ಬಂದು ಸಮೀಪದ ಗ್ರಾಮಗಳಾದ ಹುದುಗೂರು, ಕಾಳಿದೇವನ, ಹೊಸೂರು, ಮದಲಾಪುರ, ಚಿಕ್ಕತ್ತೂರು, ದೊಡ್ಡತ್ತೂರು ಸೀಗೆಹೂಸೂರು ಗ್ರಾಮದಲ್ಲಿ ದಾಳಿ ಮಾಡಿ ಬೇಸಿಗೆಯಲ್ಲಿ ಬೆಳೆದ ಬೆಳೆಯು ಸಂಪೂರ್ಣ ವಾಗಿ ಕಾಡಾನೆಗಳ ಪಾಲಾಗಿದೆ. ಭತ್ತದ ಗದ್ದೆ ನಾಟಿ ಕಾರ್ಯ ಮರು ದಿನ ಕಾಡಾನೆಗಳಿಂದ ನಾಟಿ ಮಾಡಿದ ಗದ್ದೆಗಳು ತುಳಿತದಿಂದ ನಾಲ್ಕು ಎಕರೆಗಳಷ್ಟು ಸಂಪೂರ್ಣ ನಾಶವಾಗಿದೆ.
ಹುದುಗೂರು ಕಾಳಿದೇವನಹೊಸೂರು ಮದಲಾಪುರ ಬ್ಯಾಡಗೊಟ್ಟ ಗ್ರಾಮಗಳು ಹಾರಂಗಿ ಅಚ್ಚುಕಟ್ಟು ಪ್ರದೇಶಗಳಾಗಿವೆ. ಈ ಪ್ರದೇಶದಲ್ಲಿ ಭತ್ತವನ್ನು ಬೆಳಯಲಾಗುತ್ತದೆ. ಆದರೆ ಕಳೆದ ಸಾಲಿನಿಂದ ಕಾಡಾನೆಗಳ ಹಾವಳಿಯಿಂದಾಗಿ ಭತ್ತದ ಬೆಳೆ ಕಾಡಾನೆಗಳಿಂದ ಹಾನಿಗೊಳಗಾಗುತ್ತಿರುವುದರಿಂದ ಈ ಭಾಗದಲ್ಲಿ ಜಾನುವಾರುಗಳಿಗೆ ಹುಲ್ಲಿನ ಸಮಸ್ಯೆ ಹೆಚ್ಚಾಗಿವೆ.
ಹುದುಗೂರು ಗ್ರಾಮದ ಕಾಳೇಗೌಡ ಕೃಷ್ಣೇಗೌಡ ಶಿವಣ್ಣ, ತಮ್ಮಯ್ಯ, ರವಿ, ಧನಂಜಯ, ರವೀಂದ್ರ, ಶಿವಪ್ರಕಾಶ್ ಸೇರಿದಂತೆ ಇನ್ನೂ ಅನೇಕ ರೈತರ ಬೆಳೆಗಳನ್ನು ಸಂಪೂರ್ಣ ನಾಶಪಡಿಸಿವೆ ಸ್ಥಳಕ್ಕೆ ಹುದುಗೂರು ಉಪ ಅರಣ್ಯ ಅಧಿಕಾರಿಗಳ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದೆ. ಕಾಡಾನೆಗಳ ಹಾವಳಿಯಿಂದ ನಷ್ಟವಾಗಿರುವ ಪ್ರದೇಶಗಳಿಗೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕೆಂಬದು ಈ ಭಾಗದ ರೈತರ ಒತ್ತಾಯವಾಗಿದೆ.
-ಕೆ .ಕೆ. ನಾಗರಾಜಶೆಟ್ಟಿ