ವೀರಾಜಪೇಟೆ, ಆ. 18: ಸರಕಾರದ ಮಾರ್ಗಸೂಚಿ ಗನುಗುಣವಾಗಿ ಈ ಬಾರಿ ಗೌರಿ-ಗಣೇಶ ಹಬ್ಬವನ್ನು ಇಲ್ಲಿನ ಉತ್ಸವ ಸಮಿತಿಗಳು ನಿರ್ಬಂಧದಲ್ಲಿ ಆಚರಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳ, ಓಣಿ, ಗಲ್ಲಿ, ಸರಕಾರಿ ಕಟ್ಟಡ, ಸಮುದಾಯಭವನ, ಮೈದಾನಗಳಲ್ಲಿ ಉತ್ಸವವನ್ನು ಆಚರಿಸುವಂತಿಲ್ಲ ಎಂದು ತಹಶೀಲ್ದಾರ್ ನಂದೀಶ್ ಹೇಳಿದರು.

ಐತಿಹಾಸಿಕ ಗೌರಿ ಗಣೇಶ ನಾಡ ಹಬ್ಬ ಸಮಿತಿ ವತಿಯಿಂದ ಇಲ್ಲಿನ ತಾಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಎಲ್ಲರೂ ಸೇರಿ ಸರಕಾರದ ಈ ನಿರ್ಧಾರಕ್ಕೆ ಕೈಜೋಡಿಸುವಂತಾಗಬೇಕು. ಸಾರ್ವಜನಿಕ ಆರೋಗ್ಯ ಹಿತ ದೃಷ್ಟಿಯಿಂದ ಮುಂಜಾಗ್ರತÀ ಕ್ರಮವಾಗಿ ಸರಕಾರ ಕೆಲವು ಮಾರ್ಗ ಸೂಚಿಗಳನ್ನು ತೆಗೆದುಕೊಂಡಿದೆ. ಗೌರಿ ಗಣೇಶ ಹಬ್ಬವನ್ನು ಈ ಬಾರಿ ಸರಳವಾಗಿ ಮನೆಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಷರತ್ತುಬದ್ಧವಾಗಿ ಆಚರಿಸಬೇಕು. ಸಾರ್ವಜನಿಕ ನದಿ, ಕೆರೆ, ಕೊಳ, ಬಾವಿ, ಕಲ್ಯಾಣಿಗಳಲ್ಲಿ ವಿಸರ್ಜಿಸುವಂತಿಲ್ಲ. ವಿಸರ್ಜನೆಗೆ ಜನರು ಗುಂಪು ಮೆರವಣಿಗೆಯಲ್ಲಿ ತೆರಳುವಂತಿಲ್ಲ. ದೇವಸ್ಥಾನಗಳಲ್ಲಿ ಶುಚಿತ್ವದೊಂದಿಗೆ ಮಾಸ್ಕ್ ಧರಿಸಿ ಕಡ್ಡಾಯವಾಗಿ ಸ್ಯಾನಿಟೈಸೇಷನ್ ಬಳಕೆ ಮಾಡಬೇಕು. ಸರಕಾರದ ಕ್ರಮವನ್ನು ಅನುಸರಿಸಿ ಧಾರ್ಮಿಕ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಗೌರಿಗಣೇಶ ಉತ್ಸವವನ್ನು ಆಚರಿಸಬೇಕು ಎಂದರು.

ವೀರಾಜಪೇಟೆಯ ಐತಿಹಾಸಿಕ ಗೌರಿ ಗಣೇಶೋತ್ಸವ ನಾಡ ಹಬ್ಬದ ಸಮಿತಿಯ ಅಧ್ಯಕ್ಷ ಬಿ.ಜಿ. ಸಾಯಿನಾಥ್ ಮಾತನಾಡಿ ಈ ಬಾರಿ ಕಳೆದ ವರ್ಷದಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 21 ಸಮಿತಿಗಳು ಗೌರಿಗಣೇಶ ಉತ್ಸವ ಆಚರಣೆಗೆ ಮುಂದೆ ಬಂದಿದ್ದು, ಈ ಬಾರಿ ಸಾರ್ವಜನಿಕರಿಗೆ ಮಾರಕವಾಗಿರುವ ಕೊರೊನಾ ವೈರಸ್‍ನಿಂದ ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಉತ್ಸವ ಆಚರಿಸಲು ಸಮಿತಿಗಳು ನಿರ್ಧರಿಸಿವೆ. ಒಂದೇ ದಿನ ಮೂರ್ತಿಗಳ ಪ್ರತಿಷ್ಠಾಪಿಸಿ, ವಿಸರ್ಜನೋತ್ಸವ ಮಾಡಲಿರುವುದಾಗಿ ಹಾಗೂ ಸರಕಾರದ ಈಗಿನ ಆದೇಶ ಮಾರ್ಗಸೂಚಿಗೊಳಪಟ್ಟು ವಿವಿಧ ಸಮಿತಿಗಳು ಉತ್ಸವವನ್ನು ಆಚರಿಸಲಿವೆ ಎಂದರು.

ಗೌರಿಗಣೇಶ ನಾಡಹಬ್ಬ ಸಮಿತಿ ಪರವಾಗಿ ಟಿ.ಪಿ ಕೃಷ್ಣ ಮಾತನಾಡಿ ಪಟ್ಟಣದ ಗೌರಿ ಗಣೇಶೋತ್ಸವಕ್ಕೆ ಐತಿಹಾಸಿಕ ಹಿನ್ನಲೆ ಇದೆ. ಗೌರಿಕೆರೆಯಲ್ಲಿ ಸಾಮೂಹಿಕ ವಿಸರ್ಜನೆ ನಡೆಯುತ್ತದೆ. ಈ ಬಾರಿ ಒಂದು ದಿನ ಪ್ರತಿಪ್ಠಾಪಿಸಿ ಕೇವಲ ಸಮಿತಿ ಸದಸ್ಯರು ಮಾತ್ರ ಸೇರಿ ಇದೇ ಗೌರಿಕೆರೆಯಲ್ಲಿ ವಿಸರ್ಜನೆಗೆ ಅವಕಾಶ ಮಾಡಿಕೊಡಿ ಎಂದಾಗ ತಹಶೀಲ್ದಾರ್ ನಂದೀಶ್ ಸರಕಾರದ ಮಾರ್ಗ ಸೂಚಿ ಪ್ರಕಾರ ಅವಕಾಶವಿಲ್ಲ ಎಂದರು.

ವೀರಾಜಪೇಟೆಯ ಗೌರಿಕೆರೆಯಲ್ಲಿ ಮೂರ್ತಿಗಳ ವಿಸರ್ಜನೆಗೆ ವೀರಾಜ ಪೇಟೆಗೆ ಮಾತ್ರ ಸೀಮಿತಗೊಂಡಂತೆ ಅಧಿಕಾರಿಗಳು ವಿಸರ್ಜನೆಗೆ ಅವಕಾಶ ಮಾಡಿಕೊಡುವಂತೆ ಉತ್ಸವ ಸಮಿತಿಯ ಎ. ಅನಿಲ್ ಮಂದಣ್ಣ, ಟಿ.ಜೆ. ದಿವಾಕರ್, ಶ್ರೀಕಾಂತ್, ಡಿ.ಜಿ. ಕೇಶವ ಇನ್ನು ಅನೇಕರು ಅಧಿಕಾರಿಗಳನ್ನು ಆಗ್ರಹಿಸಿದರು. ಅಧಿಕಾರಿಗಳು ಸರಕಾರದ ಆದೇಶದಂತೆ ಉತ್ಸವ ಸಮಿತಿಗಳು ಮುಂದುವರೆಯುವಂತೆ ಸೂಚಿಸಿದರು.

ವೀರಾಜಪೇಟೆ ಡಿ.ವೈ.ಎಸ್.ಪಿ. ಸಿ.ಟಿ.ಜಯಕುಮಾರ್ ಮಾತನಾಡಿ ಕೋವಿಡ್ 19 ಹಿನ್ನಲೆಯಲ್ಲಿ ಈ ಬಾರಿಯ ಗೌರಿಗಣೇಶೋತ್ಸವವನ್ನು ಸರಳವಾಗಿ ಭಕ್ತಿಯಿಂದ ಆಚರಿಸಿ ಎಂದು ತಮ್ಮ ಅಭಿಪ್ರಾಯವನ್ನು ಸಭೆಗೆ ತಿಳಿಸಿದರು. ಉತ್ಸವದ ಪೂರ್ವಭಾವಿ ಸಭೆಯಲ್ಲಿ 21 ಉತ್ಸವ ಸಮಿತಿಯ ಪ್ರತಿನಿಧಿಗಳು ಹಾಜರಿದ್ದು ತಮ್ಮ ಅಹವಾಲುಗಳನ್ನು ಸಭೆಗೆ ತಿಳಿಸಿದರು. ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ, ಚೆಸ್ಕಾಂನ ಕಿರಿಯ ಅಭಿಯಂತರ ರಮೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಬೋಜಪ್ಪ ಮತ್ತಿತರರು ಹಾಜರಿದ್ದರು.