ಗಣೇಶ ಹಬ್ಬ ಮಾರ್ಗಸೂಚಿ ಪರಿಷ್ಕರಣೆ
ಬೆಂಗಳೂರು, ಆ. 18: ಗಣೇಶ ಹಬ್ಬ ಆಚರಣೆಗೆ ಅಡ್ಡಿಯಾಗಿದ್ದ ಮಾರ್ಗಸೂಚಿ ಪರಿಷ್ಕರಣೆ ಮಾಡಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕೊರೊನಾ ಹಿನ್ನೆಲೆ ಗಣೇಶೋತ್ಸವ ಆಚರಣೆಗೆ ಅಡ್ಡಿಯುಂಟಾಗಲಿದೆ ಎಂದು ಸಾರ್ವಜನಿಕರಿಂದ ವ್ಯಕ್ತವಾದ ಆಕ್ಷೇಪಗಳ ಹಿನ್ನೆಲೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಪೂಜೆ ಪುನಸ್ಕಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಅವರು, ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಜನರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿ, ಸಾಂಪ್ರದಾಯಿಕ ಗಣೇಶೋತ್ಸವ ಆಚರಣೆಗೆ ಧಕ್ಕೆ ಬಾರದಂತೆ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಿದೆ. ಕೊರೊನಾ ಹರಡುವಿಕೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿಷ್ಕೃತ ಮಾರ್ಗಸೂಚಿಗಳನ್ವಯ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ಮತ್ತೊಮ್ಮೆ ವಿನಯ ಪೂರ್ವಕ ಮನವಿ ಮಾಡುತ್ತಿದ್ದೇನೆಂದು ಅವರು ಹೇಳಿದ್ದಾರೆ.
ಉಗ್ರರ ಸಂಪರ್ಕ: ವೈದ್ಯ ಬಂಧನ
ಬೆಂಗಳೂರು, ಆ. 18: ಇಂದು ಸಂಜೆ 5 ಗಂಟೆಗೆ ಬಸವನಗುಡಿಯಿಂದ ಡಾ. ಅಬ್ದುರ್ ರಹಮಾನ್ ಎಂಬ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಈತ 2014ರಲ್ಲಿ ಐಸಿಸ್ ಮೆಡಿಕಲ್ ಕ್ಯಾಂಪ್ಗಳಿಗೆ ಹೋಗಿ 10 ದಿನ ಇದ್ದು ಬಂದಿದ್ದ. ಮೂಲತಃ ISಏP ಎಂಬ ಉಗ್ರ ಸಂಘಟನೆಗೆ ಈತ ಸೇರಿದ್ದು, ದೇಶದ ವಿರುದ್ಧ ಪಿತೂರಿ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಈತ ಒಂದು ವಿಶೇಷವಾದ ಆ್ಯಪ್ ತಯಾರಿ ಮಾಡುತ್ತಿದ್ದು, ಅದರಿಂದ ಗಾಯಗೊಂಡ ಐಸಿಸ್ ಉಗ್ರರಿಗೆ ನೆರವು ನೀಡುವಲ್ಲಿ ಕೆಲಸ ಮಾಡುವಂತಿತ್ತು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಸಚಿವ ಅಮಿತ್ ಶಾ ಮತ್ತೆ ಆಸ್ಪತ್ರೆಗೆ
ನವದೆಹಲಿ, ಆ. 18: ಇತ್ತೀಚಿಗೆ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಲಿಕೆ ಮತ್ತು ಮೈ-ಕೈ ನೋವಿನಿಂದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲ್ಲಿನ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಕೆಲವು ದಿನಗಳ ಹಿಂದೆ ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಸೋಂಕಿನ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದರಿಂದ ಗುರುಗ್ರಾಮದಲ್ಲಿರುವ ಮೆದಾಂತ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಸದ್ಯ ಅಮಿತ್ ಶಾರ ಕೋವಿಡ್ ಪರೀಕ್ಷೆ ನೆಗೆಟಿವ್ ಬಂದಿದ್ದು ಸಚಿವರು ಆಸ್ಪತ್ರೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನಾಳೆ ಸ್ವಚ್ಛ ಸರ್ವೇಕ್ಷಣಾ ಫಲಿತಾಂಶ
ನವದೆಹಲಿ, ಆ. 18: ದೇಶದ ವಾರ್ಷಿಕ ಸ್ವಚ್ಛ ಸರ್ವೇಕ್ಷಣಾ ಸರ್ವೆ 2020ರ ಫಲಿತಾಂಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬೆಳಿಗ್ಗೆ ಪ್ರಕಟಿಸಲಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ. ಅತ್ಯುತ್ತಮ ಕಾರ್ಯಕ್ಷಮತೆ ತೋರಿದ ನಗರಗಳು ಮತ್ತು ರಾಜ್ಯಗಳಿಗೆ “ಸ್ವಚ್ಛ ಮಹೋತ್ಸವ” ಕಾರ್ಯಕ್ರಮದಲ್ಲಿ ಒಟ್ಟು 129 ಪ್ರಶಸ್ತಿಗಳನ್ನು ವಿತರಿಸಲಾಗುವುದು. ನಂತರ ಸ್ವಚ್ಛ ಭಾರತ ಯೋಜನೆ-ನಗರ (ಎಸ್ಬಿಎಂ-ಯು) ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಈ ಪೈಕಿ ಕೆಲ ಆಯ್ದ ಫಲಾನುಭವಗಳು, ಸ್ವಚ್ಛಾಗ್ರಹಿಗಳು ಮತ್ತು ಸಫಾಯಿ ಕರ್ಮಚಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಇದು ಒಟ್ಟು 4,242 ನಗರಗಳು, 62 ಕಂಟೋನ್ಮೆಂಟ್ ಮಂಡಳಿಗಳು ಮತ್ತು 92 ಗಂಗಾ ತಟದ ಪಟ್ಟಣಗಳ ಸರ್ವೆ ನಡೆಸಿದ ವಿಶ್ವದ ಅತಿದೊಡ್ಡ ಸ್ವಚ್ಛತಾ ಸಮೀಕ್ಷೆಯಾಗಿದ್ದು, 1.87 ಕೋಟಿ ನಾಗರಿಕರು ಭಾಗವಹಿಸಿದ್ದಾರೆ.
ಉಗ್ರ ಸಂಘಟನೆಯೊಂದಿಗೆ ನಂಟು
ಬೆಂಗಳೂರು, ಆ. 18: ಡಿ.ಜೆ. ಹಳ್ಳಿಯಲ್ಲಿ ಸಂಭವಿಸಿದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಅಲ್-ಹಿಂದ್ ಭಯೋತ್ಪಾದನೆ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಎನ್ನಲಾದ ಆರೋಪಿ ಸೇರಿ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧನಕ್ಕೊಳಪಡಿಸಿದ್ದು, ಕೇಂದ್ರ ಅಪರಾಧ ವಿಭಾಗದ ಭಯೋತ್ಪಾದನಾ ನಿಗ್ರಹ ದಳ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ನಿಷೇಧಿತ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆಂದು ಹೇಳಲಾಗುತ್ತಿರುವ ಸಮಿಯುದ್ದೀನ್ ಹಾಗೂ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ವಾಜೀತ್ ಬಂಧಿತ ವ್ಯಕ್ತಿಗಳಾಗಿದ್ದಾರೆ. ಸಮಿಯುದ್ದೀನ್ನನ್ನು ಕೇಂದ್ರ ಅಪರಾಧ ವಿಭಾಗದ ಭಯೋತ್ಪಾದನಾ ನಿಗ್ರಹ ದಳ ಪೊಲೀಸ್ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಶಾಸಕ ಜಮೀರ್ಗೆ ಸೋಂಕು ದೃಢ
ಬೆಂಗಳೂರು, ಆ. 18: ಮಾಜಿ ಸಚಿವ, ಹಾಲಿ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮೂಲಕ ಸ್ವತಃ ಮಾಹಿತಿ ನೀಡಿರುವ ಅವರು, ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡ ಹಿನ್ನೆಲೆ ಇಂದು ಕೊರೊನಾ ಸೋಂಕು ಪರೀಕ್ಷೆಗೆ ಒಳಗಾಗಿದ್ದೆ, ವರದಿಯಲ್ಲಿ ಸೋಂಕು ದೃಢಪಟ್ಟಿದೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಸಂಪರ್ಕವಿದ್ದವರು ಸೋಂಕು ಪರೀಕ್ಷೆಗೆ ಒಳಗಾಗಿ ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಚುನಾವಣಾ ಆಯುಕ್ತ ಅಶೋಕ್ ರಾಜೀನಾಮೆ
ನವದೆಹಲಿ, ಆ. 18: ಚುನಾವಣಾ ಆಯೋಗದ ಮುಖ್ಯಸ್ಥರಾಗಿರುವ ಭಾವಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್(ಎಡಿಬಿ)ಯ ಹೊಸ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆಲ ದಿನಗಳ ನಂತರ ಅಶೋಕ್ ಲವಾಸಾ ಅವರು ಚುನಾವಣಾ ಆಯುಕ್ತರ ಹುದ್ದೆಗೆ ರಾಜೀನಾಮೆ ನೀಡಿದರು. ಅವರು ಸೆಪ್ಟೆಂಬರ್ನಲ್ಲಿ ಎಡಿಬಿಗೆ ಸೇರುವ ಸಾಧ್ಯತೆ ಇದೆ. ಲವಾಸಾ ಜನವರಿ 23, 2018 ರಂದು ಚುನಾವಣಾ ಆಯುಕ್ತರಾಗಿ ನೇಮಕವಾಗಿದ್ದರು, ಅವರು ಹರಿಯಾಣ ಕೇಡರ್(1980 ಬ್ಯಾಚ್)ನ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದು ಈ ಹಿಂದೆ ಹಣಕಾಸು ಕಾರ್ಯದರ್ಶಿಯಾಗಿ, ಪರಿಸರ ಮತ್ತು ನಾಗರಿಕ ವಿಮಾನಯಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 2001-02 ರಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಅವರು ಎಡಿಬಿಗೆ ಸಂಬಂಧಿಸಿದ ವಿಷಯಗಳನ್ನು ಗಮನಿಸಿದ್ದರು.
ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು
ನವದೆಹಲಿ, ಆ. 18: ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾಗಿರುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಟೀಂ ಇಂಡಿಯಾ ಉಪನಾಯಕ ಮತ್ತು ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಸೇರಿದಂತೆ ಒಟ್ಟು ನಾಲ್ವರ ಹೆಸರನ್ನು ಅತ್ಯುನ್ನತ ಗೌರವಕ್ಕಾಗಿ ಶಿಫಾರಸ್ಸು ಮಾಡಲಾಗಿದೆ. ರೋಹಿತ್ ಶರ್ಮಾ ಅವರೊಂದಿಗೆ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್, ಟೇಬಲ್ ಟೆನ್ನಿಸ್ ಚಾಂಪಿಯನ್ ಮಾನಿಕಾ ಬಾತ್ರಾ ಮತ್ತು ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು ಅವರನ್ನು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ ಮತ್ತಿತರೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನಿರ್ಧರಿಸಲು ಆಯ್ಕೆ ಸಮಿತಿ ಮಂಗಳವಾರ ಸಭೆ ಸೇರಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.