ಶ್ರೀಮಂಗಲ, ಆ. 18: ಪ್ರಸಕ್ತ ವರ್ಷ ಅತೀವೃಷ್ಟಿಗೆ ತುತ್ತಾಗಿ ನಷ್ಟವಾಗಿರುವ ಬೆಳೆಗಳ ಸಮೀಕ್ಷೆಯನ್ನು ಸಂಬಂಧಿಸಿದ ಇಲಾಖೆಗಳು ಜಂಟಿಯಾಗಿ ನಡೆಸಿ ಇದೇ ತಾ. 21 ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಕೊಡಗು ಬೆಳೆಗಾರರ ಒಕ್ಕೂಟದ ನಿಯೋಗ ಜಿಲ್ಲಾಧಿಕಾರಿಯವರನ್ನು ಮಡಿಕೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭ ಈ ಬಗ್ಗೆ ಅವರು ಮಾಹಿತಿ ನೀಡಿದರು. ಇದಲ್ಲದೇ ಒಕ್ಕೂಟದ ಮನವಿಯಲ್ಲಿ ಪ್ರಸ್ತಾಪಿಸಿದ ಬೇಡಿಕೆಯಾದ ಸಣ್ಣ ಬೆಳೆಗಾರರಿಗೆ ಬಿಪಿಎಲ್ ಕಾರ್ಡ್ ನೀಡುವುದು, ಬೆಳೆ ನಷ್ಟಕ್ಕೆ ಈಗ ಇರುವ ಎನ್.ಡಿ.ಆರ್.ಎಫ್. ಪರಿಹಾರ ಪ್ರಮಾಣವನ್ನು ಪರಿಷ್ಕರಿಸಿರುವುದು ಕಾಫಿ ಬೆಳೆಗಾರರಿಗೆ 10 ಹೆಚ್.ಪಿ ವರೆಗಿನ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡುವ ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದರು.
ನಿಯೋಗದಲ್ಲಿ ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್‍ಅಪ್ಪಯ್ಯ, ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಖಜಾಂಚಿ ಮಾಣೀರ ವಿಜಯ ನಂಜಪ್ಪ ಹಾಜರಿದ್ದರು.