ಶ್ರೀಮಂಗಲ, ಆ. 18: ಬಿ.ಶೆಟ್ಟಿಗೇರಿ ಮತ್ತು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಇತ್ತೀಚೆಗೆ ಸುರಿದ ಬಾರಿ ಮಳೆ ಮತ್ತು ಬಿರುಗಾಳಿಯಿಂದ ಕಾಫಿ, ಕಾಳುಮೆಣಸು, ಅಡಿಕೆ, ಬಾಳೆ ಅಲ್ಲದೇ ಭತ್ತ ಬೆಳೆಗೆ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಆದ್ದರಿಂದ ಈ ವ್ಯಾಪ್ತಿಯ ಬೆಳೆಗಾರರಿಗೆ ಸರಕಾರ ಶಾಶ್ವತ ಪರಿಹಾರವನ್ನು ನೀಡಬೇಕೆಂದು ಕುತ್ತುನಾಡು-ಬೇರಳಿನಾಡು ಬೆಳೆಗಾರ ಸಂಘ ಆಗ್ರಹಿಸಿದೆ.
ಗ್ರಾಮದಲ್ಲಿ ನಷ್ಟವಾಗಿರುವ ಬೆಳೆಗಳ ಬಗ್ಗೆ ಮಾಧ್ಯಮದವರೊಂದಿಗೆ ಸಂಘದ ಅಧ್ಯಕ್ಷ ತೀತಿಮಾಡ ಲಾಲ ಭೀಮಯ್ಯ ಅವರು ಮಾತನಾಡಿ ಸತತ ಮೂರು ವರ್ಷಗಳಿಂದ ಈ ಭಾಗಗಳಲ್ಲಿ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಕೇವಲ 3-4 ದಿನಗಳಲ್ಲಿ 60 ರಿಂದ 70 ಇಂಚು ಮಳೆಯಾಗಿದ್ದು, ಹಾಗೆಯೇ ಬೀಸಿದ ಭಾರೀ ಗಾಳಿಯಿಂದ ಕಾಫಿ ಗಿಡದ ರೆಂಬೆಗಳು ಮುರಿದು ಬಿದ್ದು, ತೋಟದಲ್ಲಿದ್ದ ಇತರ ಮರಗಳು ಸಹ ಮುರಿದು ಬಿದ್ದಿದ್ದು, ಕಾಫಿ ಭಾರೀ ಪ್ರಮಾಣದಲ್ಲಿ ಉದುರಿದೆ. ಕಾಳುಮೆಣಸು ಬಳ್ಳಿ ಹಬ್ಬಿದ್ದ ಮರಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ತೋಟದಲ್ಲಿ ಧರೆಗುರುಳಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.
ಕಳೆದ ವರ್ಷ ನಷ್ಟಪರಿಹಾರವಾಗಿ ಕಾಫಿ ಬೆಳೆಗೆ ಎಕ್ಟೇರ್‍ಗೆ 19 ಸಾವಿರ ರೂಪಾಯಿ ಪರಿಹಾರವಾಗಿ ನೀಡಲಾಗಿತ್ತು. ಆದರೆ ಅದಕ್ಕಿಂತ ಹೆಚ್ಚು ನಷ್ಟ ಪ್ರಸಕ್ತ ವರ್ಷ ಸಂಭವಿಸಿದ್ದು, ವಸ್ತುಸ್ಥಿತಿಯನ್ನು ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪ್ರತಿ ವರ್ಷ ಪ್ರಾಕೃತಿಕ ವಿಕೋಪದಿಂದ ಬೆಳೆಗಾರರ ಬದುಕು ದುಸ್ಥಿತಿಯತ್ತ ಸಾಗುತ್ತಿದೆ. ಸಂಬಂಧಿಸಿದ ಇಲಾಖೆಯವರು ಸಮೀಕ್ಷೆಗೆ ತಡಮಾಡಿದರೆ ಕಾಫಿ ಉದುರಿರುವುದು ಗೋಚರಿಸುವುದಿಲ್ಲ. ಕಾಫಿ ಫಸಲು ನಷ್ಟವಾಗುವುದಕ್ಕೂ ಮೊದಲು ಫಸಲಿನ ಪ್ರಮಾಣವನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು.
ಸಂಘದ ಕಾರ್ಯದರ್ಶಿ ಅಮ್ಮಣಿಚಂಡ ರಂಜಿ ಪೂಣಚ್ಚ ಅವರು ಮಾತನಾಡಿ ರಸಗೊಬ್ಬರ ಬೆಲೆ ಗಗನಕ್ಕೆ ಏರಿದೆ. ಕಾರ್ಮಿಕರ ಕೊರತೆ ಮತ್ತು ದುಬಾರಿ ಕೂಲಿ, ಕಾಫಿ ದರ ಕುಸಿತ, ವನ್ಯ ಪ್ರಾಣಿಗಳ ಹಾವಳಿಯಿಂದ ಬೇಸತ್ತು ಹೋಗಿರುವ ಬೆಳೆಗಾರರಿಗೆ ಪ್ರಾಕೃತಿಕ ವಿಕೋಪ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂತಹ ಪರಿಸ್ಥಿತಿಯಿಂದ ಹೊರತಂದು ಬೆಳೆಗಾರರ ಬದುಕಿನಲ್ಲಿ ಪುನಶ್ಚೇತನ ಮೂಡಿಸಲು ಸರಕಾರ ಸೂಕ್ತ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿದರು.
ಸಂಘದ ಸಂಚಾಲಕ ಮದ್ರೀರ ಗಿರೀಶ್ ಅವರು ಮಾತನಾಡಿ, ಸರಕಾರ ಬೆಳೆಗಾರರ ಸಂಕಷ್ಟ ಅರಿತು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಬೆಳೆನಷ್ಟದಿಂದ ಉಂಟಾಗಿರುವ ಸಂಕಷ್ಟಕ್ಕೆ ಸೂಕ್ತ ನೆರವು ನೀಡಬೇಕೆಂದು ಆಗ್ರಹಿಸಿದರು.
ವಿಮೆ ಯೋಜನೆ ಜಾರಿ ಮಾಡುವುದರಿಂದ ಸರಕಾರ ಪರಿಹಾರದೊಂದಿಗೆ ವಿಮೆ ಸೌಲಭ್ಯದಿಂದ ರೈತನಿಗೆ ನಷ್ಟಪರಿಹಾರ ಹೆಚ್ಚು ದೊರೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ ಅವರು ಇದನ್ನು ಜಾರಿಗೆ ತರಲು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಕಾಳಜಿ ವಹಿಸಬೇಕೆಂದು ಮನವಿ ಮಾಡಿದರು.
ಸಂಘದ ಸದಸ್ಯರಾದ ನಾಮೇರ ದಾದ ಮಾತನಾಡಿ, ಪ್ರತಿ ಎಕರೆಗೆ ಕನಿಷ್ಟ 25 ಸಾವಿರ ಪರಿಹಾರ ಧನವನ್ನು ನೀಡಬೇಕು. ಈಗಿನ ಪರಿಸ್ಥಿತಿಯಲ್ಲಿ ಎಕರೆಗೆ 10 ರಿಂದ 15 ಚೀಲ ಕಾಫಿ ಫಸಲು ನಾಶವಾಗಿದೆ. ಹಾಗೆಯೇ ಕಾಳುಮೆಣಸು ಬಳ್ಳಿಗಳು ಕೂಡ ಧÀರೆಗುರುಳಿದ್ದು, ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕೆಂದು ಒತ್ತಾಯಿಸಿದರು.