*ಸಿದ್ದಾಪುರ, ಆ.18 : ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಿಗಳೇ ಮಳೆಹಾನಿಯಿಂದ ನೊಂದಿರುವ ರೈತರು ಹಾಗೂ ಬೆಳೆಗಾರರ ಬಳಿ ಬಂದು ಅರ್ಜಿ ಸ್ವೀಕರಿಸುವ ಮೂಲಕ ಪರಿಹಾರ ಸ್ವೀಕಾರಕ್ಕೆ ನೆರವಾಗಿದ್ದಾರೆ.
ಸೋಮವಾರಪೇಟೆ ತಾ.ಪಂ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಅವರ ಮನವಿ ಮೇರೆಗೆ ತೋಟಗಾರಿಕಾ ಇಲಾಖೆ ಅಧಿಕಾರಿ ಶೋಭಾ ಅವರು ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನರೇಂದ್ರಮೋದಿ ಭವನದಲ್ಲಿ ಮಳೆಹಾನಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸಿದರು.
ಚೆಟ್ಟಳ್ಳಿ, ವಾಲ್ನೂರು ತ್ಯಾಗತ್ತೂರು ಮತ್ತು ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಯಿಂದ ಉಂಟಾದ ತೋಟಗಾರಿಕಾ ಬೆಳೆಗಳ ಹಾನಿಯ ಬಗ್ಗೆ ಪರಿಹಾರಕ್ಕಾಗಿ ಮಾಹಿತಿ ಸಹಿತ ಅರ್ಜಿ ಸಲ್ಲಿಸಿದ ಬೆಳೆಗಾರರು ಇತ್ತೀಚೆಗೆ ಸುರಿದ ಧಾರಾಕಾರ ಮಳೆಯ ಪರಿಣಾಮವನ್ನು ವಿವರಿಸಿದರು.
ಜಿಲ್ಲೆಯ ಗದ್ದೆ ಮತ್ತು ತೋಟಗಳು ಪ್ರವಾಹಕ್ಕೆ ತುತ್ತಾಗಿದ್ದು, ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಆದರೆ ಸರ್ಕಾರ 1 ಲಕ್ಷ ರೂ.ನಷ್ಟು ನಷ್ಟವಾದರೆ ಕೇವಲ ಒಂದು, ಎರಡು ಸಾವಿರ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಷ್ಟಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಅರ್ಜಿದಾರರು ಪರಿಹಾರದ ಮೊತ್ತ ವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿ ದರು. ಬೆಳೆಗಾರರ ಮನವಿಯನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಡ ಬೇಕೆಂದು ತಿಳಿಸಿದರು.
ಕೋವಿಡ್ ಕಾರಣಕ್ಕಾಗಿ ಯಾವುದೇ ಬಸ್ ಸಂಚಾರ ವ್ಯವಸ್ಥೆಯಿಲ್ಲದೆ ದೂರದೂರುಗಳ ರೈತರು ಹಾಗೂ ಬೆಳೆಗಾರರು ತಾಲೂಕು ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸುವುದು ಅಸಾಧ್ಯವಾಗಿದೆ. ಈ ಅತಂತ್ರ ಪರಿಸ್ಥಿತಿಯಲ್ಲಿ ಮಣಿಉತ್ತಪ್ಪ ಅವರ ಕಾಳಜಿಯಿಂದ ಅಧಿಕಾರಿಗಳು ಸ್ವತ: ನಮ್ಮ ಬಳಿ ಬಂದು ಅರ್ಜಿ ಸ್ವೀಕರಿಸಿದ್ದಾರೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧಿಕಾರಿ ಶೋಭಾ ಅವರು ಮಾತನಾಡಿ ಮಳೆಹಾನಿಗೆ ಸಂಬಂಧಿಸಿದಂತೆ ರೈತರು ಹಾಗೂ ಬೆಳೆಗಾರರು ಸಲ್ಲಿಸುವ ಅರ್ಜಿಗಳನ್ನು ವಿಂಗಡಿಸಿ ಆಯಾ ಇಲಾಖೆಗಳ ಮೂಲಕವೇ ಪರಿಹಾರವನ್ನು ಒದಗಿಸಲಾಗುವುದು ಎಂದರು. ಗದ್ದೆಗಳಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆ, ಕಾಫಿಗೆ ಕಾಫಿ ಮಂಡಳಿ, ಕರಿಮೆಣಸು ನಷ್ಟಕ್ಕೆ ಸಾಂಬಾರ ಮಂಡಳಿ ಹಾಗೂ ತೋಟಗಾರಿಕಾ ಬೆಳೆಗಳ ನಷ್ಟಕ್ಕೆ ತೋಟಗಾರಿಕಾ ಇಲಾಖೆಯಿಂದ ಪರಿಹಾರ ದೊರೆಯಲಿದೆ ಎಂದರು. ಎಲ್ಲಾ ಅರ್ಜಿಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಶೀಘ್ರ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮಳೆಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಹಾಗೂ ಬೆಳೆಗಾರರಿಂದ ನಿರೀಕ್ಷೆಗೂ ಮೀರಿದ ಸಂಖ್ಯೆಯ ಅರ್ಜಿಗಳು ಸಲ್ಲಿಸಲ್ಪಟ್ಟವು.
ಚೆಟ್ಟಳ್ಳಿ ಗ್ರಾ.ಪಂ. ಸದಸ್ಯರುಗಳಾದ ಕಂಠಿ ಕಾರ್ಯಪ್ಪ, ರವಿ, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮರದಾಳು ಉಲ್ಲಾಸ, ನಿರ್ದೇಶಕರು ಗಳಾದ ಪೇರಿಯನ ಪೂಣಚ್ಚ, ಪುತ್ತೇರಿರ ಸೀತಮ್ಮ, ಕೊಂಗೇಟಿರ ವಾಣಿ ಕಾಳಪ್ಪ, ಕಾಶಿ, ಕಣಜಾಲು ಪೂವಯ್ಯ, ನೂಜಿಬೈಲು ನಾಣಯ್ಯ, ಶಾಂತಪ್ಪ, ಹರಿಣಿ, ಲೆಕ್ಕಾಧಿಕಾರಿ ರಮೇಶ್, ಉಳುವಾರನ ನಂದಿನಿ ಹಾಗೂ ಸಿಬ್ಬಂದಿ ವರ್ಗ ಈ ಸಂದರ್ಭ ಹಾಜರಿದ್ದರು. - ಅಂಚೆಮನೆ ಸುಧಿ