ವಿಶೇಷ ವರದಿ: ಹೊದ್ದೆಟ್ಟಿ ಸುಧೀರ್

ಕರಿಕೆ, ಅ. 18: ಇಡೀ ಜಗತ್ತಿನಲ್ಲಿ ವ್ಯಾಪಿಸಿದ ಮಾರಕ ಕೊರೊನಾ ವೈರಸ್‍ದಿಂದಾಗಿ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗಿದ್ದು ರೋಗವನ್ನು ತಡೆಗಟ್ಟಲು ರಾಜ್ಯದ ಗಡಿ ಪ್ರದೇಶಗಳಾದ ಕೊಡಗಿನ ಕರಿಕೆ, ಕುಟ್ಟ, ಮಾಕುಟ್ಟಗಳಲ್ಲಿ ರಾಜ್ಯ ಸರ್ಕಾರದ ಸೂಚನೆಯಂತೆ ಕಳೆದ ಮಾರ್ಚ್ ತಿಂಗಳಲ್ಲಿ ಕೊಡಗು ಜಿಲ್ಲಾಡಳಿತ ರಸ್ತೆಗೆ ಮಣ್ಣು ಸುರಿದು ಅಂತರ್ ಜಿಲ್ಲೆಯ ಸಂಪರ್ಕವನ್ನು ಕಡಿತಗೊಳಿಸಿತ್ತು.

ಇದಕ್ಕೆ ಕೇರಳ ಸರಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗಡಿ ರಸ್ತೆಯನ್ನು ಸಂಚಾರ ಮುಕ್ತಗೊಳಿಸುವಂತೆ ಕರ್ನಾಟಕ ಸರಕಾರದ ಮೇಲೆ ಒತ್ತಡ ಹೇರಿದಲ್ಲದೆ ನ್ಯಾಯಾಲಯದ ಕದಕೂಡ ತಟ್ಟಿತ್ತು. ಆದರೆ ಜಿಲ್ಲೆಯ ಗಡಿ ರಸ್ತೆಯ ಮಣ್ಣು ತೆರವುಗೊಳಿಸಲು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಇತರ ಜನ ಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮವಾಗಿ ನೂರಾರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಉಂಟಾಗುವ ಅನಾಹುತದ ಬಗ್ಗೆ ರಾಜ್ಯ ಸರಕಾರದ ಗಮನ ಸೆಳೆದು ಜಿಲ್ಲೆಗೆ ಅಂತರ್ ರಾಜ್ಯದ ಜನರ ಸಂಚಾರ ನಿಷೇಧಿಸುವಲ್ಲಿ ಯಶಸ್ವಿಯಾದರು.

ಅಲ್ಲದೆ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನರ ಸಂಪೂರ್ಣ ಸಹಕಾರದಿಂದ ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಶ್ರಮಿಸಿದರು. ಇದರಿಂದಾಗಿ ಕೇರಳದ ಪನತ್ತಡಿ ಗ್ರಾಮ ಪಂಚಾಯತಿಯ ಪಾಣತ್ತೂರಿನೊಂದಿಗೆ ದೈನಂದಿನ ಚಟುವಟಿಕೆಗಳಿಗೆ ಅವಲಂಭಿತರಾಗಿದ್ದ ಗಡಿಗ್ರಾಮದ ಕರಿಕೆಯ ಜನತೆ ಸಂಕಷ್ಟಕ್ಕೀಡಾದರೂ ಅಲ್ಪಮಟ್ಟಿಗೆ ಪರಿಸ್ಥಿತಿಗೆ ಹೊಂದಿಕೊಂಡು ದೂರದ ಸುಳ್ಯ, ಕುಶಾಲನಗರ, ಮಡಿಕೇರಿಯಿಂದ ದಿನಸಿ ಸಾಮಗ್ರಿ, ವೈದ್ಯಕೀಯ ಸೇವೆಗಳನ್ನು ಪಡೆದುಕೊಂಡು ಸರಕಾರದ ನಿಯಮವನ್ನು ಪಾಲಿಸಿದರು.

ಆದರೆ ಇದೀಗ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಗ್ರಾಮದ ಜನಪ್ರತಿನಿಧಿಗಳು ಜನರು ಶಾಸಕರಿಗೆ ಮಣ್ಣು ತೆರವುಗೊಳಿಸುವಂತೆ ಸತತ ಮನವಿ ಮಾಡಿದರ ಪರಿಣಾಮವಾಗಿ ಶಾಸಕ ಕೆ.ಜಿ. ಬೋಪಯ್ಯ ಅವರು ವಾರದ ಹಿಂದೆ ಜಿಲ್ಲಾಡಳಿತದ ಗಮನಕ್ಕೆ ತಂದು ಮಣ್ಣು ತೆರವು ಮಾಡಲು ಕ್ರಮವಹಿಸಿದರು. ಇತ್ತ ಕರ್ನಾಟಕದ ಗಡಿಯಲ್ಲಿ ಮಣ್ಣು ತೆರವುಮಾಡುತ್ತಿದ್ದಂತೆ ಪ್ರತಿಯಾಗಿ ಕೇರಳ ರಾಜ್ಯದ ಗಡಿಭಾಗದಲ್ಲಿ ಗೇಟ್ ಅಳವಡಿಸಿ ಕರಿಕೆ ಭಾಗದಿಂದ ವೈದ್ಯಕೀಯ ಅಗತ್ಯ ಹೊರತುಪಡಿಸಿ ಬೇರೆಯಾವುದೇ ಕಾರಣಕ್ಕೂ ಜನರಿಗೆ ಸಂಚಾರಕ್ಕೆ ಅವಕಾಶ ನಿಬರ್ಂಧಿಸಿದ್ದು, ಇದರಿಂದ ಜನರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಮೂವತ್ತು ಕಿ.ಮಿ. ದೂರದ ಸುಳ್ಯಕ್ಕೆ ವೈದ್ಯಕೀಯ ಸೇವೆ ಹಾಗೂ ಶೈಕ್ಷಣಿಕ ಕಾರ್ಯಕ್ಕೆ ತೆರಳಲು ಸುಮಾರು ನೂರ ಇಪ್ಪತ್ತು ಕಿ.ಮಿ. ಸುತ್ತಿ ಬಳಸಿ ಮಡಿಕೇರಿ-ಸಂಪಾಜೆ ಮಾರ್ಗವಾಗಿ ತೆರಳಬೇಕಿದ್ದು, ಬಸ್ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ.

ಅಲ್ಲದೇ ದಿನಸಿ ಸಾಮಗ್ರಿಗಳನ್ನು ಕೊಳ್ಳಲು ಪಾಣತ್ತೂರಿಗೆ ತೆರಳಲು ಕೇರಳದ ಪೆÇಲೀಸರು ತಡೆಯೊಡ್ಡುತ್ತಿರುವ ಕಾರಣ ಕರಿಕೆ ಗ್ರಾಮದ ಜನತೆ ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಕೊಡಗು ಜಿಲ್ಲಾಡಳಿತ ನೆರೆಯ ಕಾಸರಗೋಡು ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ಎರಡು ರಾಜ್ಯದ ಗಡಿ ರಸ್ತೆ ಸಂಚಾರ ಸಮಸ್ಯೆಯನ್ನು ಇತ್ಯರ್ಥ ಪಡಿಸಿ ಸ್ಥಳೀಯರಿಗೆ ತೆರಳಲು ಅನುವುಮಾಡಿಕೊಡುವ ನಿಟ್ಟಿನಲ್ಲಿ ಕೂಡಲೇ ಕ್ರಮ ವಹಿಸಬೇಕೆಂದು ಗ್ರಾಮಸ್ಥರು ‘ಶಕ್ತಿ’ ಮೂಲಕ ಆಗ್ರಹಿಸಿದ್ದಾರೆ.