ಮಡಿಕೇರಿ, ಆ. 18 : ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಪ್ರವಾಹವನ್ನು ತಡೆಗಟ್ಟುವ ಕಾರಣವನ್ನು ನೀಡಿ, ನದಿಯ ಹೂಳೆತ್ತುವ ನೆಪವೊಡ್ಡಿ ಅವೈಜ್ಞಾನಿಕ ಕಾಮಗಾರಿ ನಡೆಸುವ ಮೂಲಕ 88 ಲಕ್ಷದಿಂದ 1 ಕೋಟಿ ರೂ.ಗಳಷ್ಟು ಹಣವನ್ನು ಪೋಲು ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಮುಖ ವಿ.ಪಿ.ಶಶಿಧರ್ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷಾಂತರ ವ್ಯಯಿಸಿ ಕುಶಾಲನಗರದಲ್ಲಿ ಕಾವೇರಿ ನದಿಯಿಂದ ಹೂಳೆತ್ತುವ ಮತ್ತು ನದಿ ದಂಡೆಯ ಗಿಡಗಂಟಿಗಳನ್ನು ತೆಗೆಯುವ ಕಾಮಗಾರಿ ಕೈಗೊಳ್ಳಲಾಯಿತು. ಆದರೆ ಈ ಬಾರಿಯೂ ವಿವಿಧ ಬಡಾವಣೆÉಗಳ ಪ್ರವಾಹದ ಸಮಸ್ಯೆಯನ್ನು ತಡೆಗಟ್ಟಲು ಸಾಧ್ಯವಾಗಿಲ್ಲವೆಂದು ವ್ಯಂಗ್ಯವಾಡಿದರು.

ಕಾವೇರಿ ನದಿಯ ಹೂಳೆತ್ತಿರುವುದರಿಂದ ಕುಶಾಲನಗರದಲ್ಲಿ ಪ್ರವಾಹದ ಪ್ರಮಾಣ ಕಡಿಮೆಯಾಯಿತೆನ್ನುವ ಅರ್ಥಹೀನ ಹೇಳಿಕೆಯನ್ನು ಶಾಸಕ ಅಪ್ಪಚ್ಚು ರಂಜನ್ ಅವರು ನೀಡಿದ್ದಾರೆ. ಈ ಬಾರಿ ಪ್ರವಾಹ ಕಡಿಮೆಯಾಗಿರುವುದಕ್ಕೆ ಕಳೆದ ಸಾಲಿನಷ್ಟು ಮಳೆÉಯಾಗದಿರುವುದೇ ಕಾರಣವಾಗಿದೆ. ಅಷ್ಟೇ ಪ್ರಮಾಣದ ಮಳೆÉಯಾಗಿದ್ದರೆ ಮತ್ತಷ್ಟು ಪ್ರವಾಹದ ಅನಾಹುತಗಳು ಸಂಭವಿಸುತ್ತಿತ್ತೆಂದು ಶಶಿಧರ್ ಅಭಿಪ್ರಾಯಪಟ್ಟರು. ಕುಶಾಲನಗರದಲ್ಲಿ ಕಾವೇರಿ ನದಿಯ ಹೂಳೆತ್ತುವ ಕಾಮಗಾರಿಯನ್ನು ಶಾಸಕರು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡರು ಎಂದು ಆರೋಪಿಸಿದರು.

ಕುಶಾಲನಗರದಲ್ಲಿ ಈ ಹಿಂದೆ ಬಡಾವಣೆಗಳು ಬೆಳೆದಿರಲಿಲ್ಲ, ಜನಸಂಖ್ಯೆಯೂ ಈ ಪ್ರಮಾಣದಲ್ಲಿ ಇರಲಿಲ್ಲ. ಪ್ರಸ್ತುತ ನದಿ ಪಾತ್ರದಲ್ಲಿ ಸಾಕಷ್ಟು ಪ್ರದೇಶ ಒತ್ತುವರಿಯಾಗಿದ್ದು, ಪ್ರಭಾವಿಗಳ ಪ್ರಭಾವದಿಂದ ಬಡಾವಣೆಗಳು ನಿರ್ಮಾಣವಾಗಿದೆ. ಇದೇ ಪ್ರವಾಹಕ್ಕೆ ಕಾರಣವಾಗಿದೆ ಎಂದ ಶಶಿಧರ್, ಇಂತಹ ಕಟು ಸತ್ಯ ಗೊತ್ತಿದ್ದೂ ಶಾಸಕರು ಮೌನವಾಗಿದ್ದಾರೆಂದರು.

ಜಿ.ಪಂ. ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ, ಕಾವೇರಿ ನದಿಯ ಹೂಳೆತ್ತುವ ಕಾಮಗಾರಿಯ ಕುರಿತು ನಾನು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಶಾಸಕರು ತನ್ನನ್ನು ‘ಅರಳು ಮರಳು’ ಎಂದು ಲೇವಡಿ ಮಾಡಿದ್ದಾರೆ. ಆದರೆ, ಮಂತ್ರಿಯಾಗಿಲ್ಲ ಎನ್ನುವ ಕಾರಣದಿಂದ ಅಪ್ಪಚ್ಚು ರಂಜನ್ ಅವರಿಗೆ ಆ ಸ್ಥಿತಿ ಬಂದಿದೆ ಎಂದು ಕುಟುಕಿದರು. ಹೂಳೆತ್ತುವ ಕಾಮಗಾರಿಯಿಂದ ಸಾಕಷ್ಟು ಹಣ ಪೋಲಾಗಿದ್ದು, ಈ ಯೋಜನೆ ಮತ್ತೆ ಅನುಷ್ಟಾನಕ್ಕೆ ತರಬಾರದೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಘಟಕದ ಪ್ರಮುಖ ರಜಾಕ್, ಯುವ ಕಾಂಗ್ರೆಸ್ ಅಧ್ಯಕ್ಷ ಪುನೀತ್ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಘಟಕದ ಜಿಲ್ಲಾ ಸಂಚಾಲಕ ತೆನ್ನೀರಾ ಮೈನ ಉಪಸ್ಥಿತರಿದ್ದರು.