ಮಡಿಕೇರಿ, ಆ. 17: ಮನೆ ಮನೆ ಕಾವ್ಯಗೋಷ್ಠಿ ಸಂವರ್ಧಕ ಪರಿಷತ್ತು ಸಮೂಹದಲ್ಲಿ ಆಗಸ್ಟ್ 15ರಂದು ವಾಟ್ಸ್ ಆಪ್ ಬಳಗದಲ್ಲಿ ನಡೆಯಿತು. ‘ಶಕ್ತಿ’ ಸಲಹಾ ಸಂಪಾದಕರು ಹಾಗೂ ಕೊಡಗು ಜಾನಪದ ಪರಿಷತ್ ಅಧ್ಯಕ್ಷರಾದ ಅನಂತಶಯನರವರ ಪ್ರಾಯೋಜಕತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ನಡೆದ ಸ್ಪರ್ಧೆಗೆ 61 ಕವಿತೆಗಳು ಬಂದಿದ್ದವು.

ಅವುಗಳಲ್ಲಿ 3 ಕವನಗಳು ಸ್ಪರ್ಧೆಗೆ ಪರಿಗಣಿಸಿರುವುದಿಲ್ಲ. ಕರ್ನಾಟಕದ ಮೂಲೆ ಮೂಲೆಗಳಿಂದ ಅಲ್ಲದೆ ಪುಣೆ, ಕೇರಳ, ಮುಂಬಯಿ ಮುಂತಾದ ಕಡೆಗಳಿಂದ ಬಂದಿದ್ದ ಕವಿತೆಗಳನ್ನು ಪಾರದರ್ಶಕ ಕ್ರಮದಂತೆ ತೀರ್ಪುಗಾರರಿಗೆ ಕಳುಹಿಸಿ ಕೊಡಲಾಗಿತ್ತು. ಈ ಸ್ಪರ್ಧೆಯಲ್ಲಿ ಮಡಿಕೇರಿಯ ಕೊಟ್ಟಕೇರಿಯನ ಲೀಲಾ ದಯಾನಂದ ಪ್ರಥಮ, ಕೇರಳದ ಕಾಸರಗೋಡಿನ ಲಕ್ಷ್ಮೀ ವಿ ಭಟ್ ದ್ವಿತೀಯ ಮತ್ತು ಗೋಣಿಕೊಪ್ಪಲಿನ ಭಾಗ್ಯವತಿ ಟಿ.ವಿ. ತೃತೀಯ ಬಹುಮಾನ ಪಡೆದುಕೊಂಡರು. ಮೂರ್ನಾಡಿನ ಗಿರೀಶ್ ಎಸ್ ಕಿಗ್ಗಾಲು ಹಾಗೂ ವಿ. ರಾಧ ಚಾಮರಾಜನಗರ ಇವರು ತೀರ್ಪುಗಾರರಾಗಿದ್ದರು.

ಸ್ಪರ್ಧೆಗೆ ಪ್ರಥಮ, ದ್ವಿತೀಯ, ತೃತೀಯ, ನಗದು ಬಹುಮಾನವನ್ನು ಅನಂತಶಯನ ಅವರು ಪ್ರಾಯೋಜಿಸಿದ್ದರು. ಕೆಲ ದಿನಗಳ ಹಿಂದೆ ಗೌರಮ್ಮ ಮಾದಮ್ಮಯ್ಯ ಅವರ ಪ್ರಾಯೋಜಕತ್ವದಲ್ಲಿ ನಡೆದ ಕವನ ಸ್ಪರ್ಧೆಯಲ್ಲಿ ಕಿಗ್ಗಾಲು ಎಸ್. ಗಿರೀಶ್ ಪ್ರಥಮ ಕುಮಾರಿ ಬೊಳ್ಳೆರ ಸುಮನ್ ತಮ್ಮಯ್ಯ ದ್ವಿತೀಯ ಹಾಗೂ ಬೆಂಗಳೂರಿನ ಸುಜಾತ ರವೀಶ್ ತೃತೀಯ ಬಹುಮಾನಕ್ಕೆ ಭಾಜನರಾಗಿದ್ದರು ಎಂದು ಸಂಚಾಲಕ ವೈಲೇಶ್ ಪಿ.ಎಸ್. ತಿಳಿಸಿದ್ದಾರೆ.