ಕಣಿವೆ, ಆ. 17 : ಕಳೆದ ಮೂರು ವರ್ಷಗಳಿಂದಲೂ ಸತತವಾಗಿ ಕಾವೇರಿ ನದಿಯ ನೀರಿನ ಪ್ರವಾಹ ಬಂದು ಹಾನಿಯಾಗುತ್ತಿರುವ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಮಣ್ಣು ತುಂಬಿಸುವುದನ್ನು ಸ್ಥಳೀಯ ನೆರೆ ಸಂತ್ರಸ್ತರು ವಿರೋಧಿಸಿದ್ದಾರೆ.
ಗಂಧದ ಕೋಟಿ ಬಳಿಯ ಲಕ್ಷ್ಮಿ ಸಾಮಿಲ್ ಬಳಿ ನರಸಯ್ಯ ಎಂಬವರು ತಮ್ಮ ಜಾಗದಲ್ಲಿ ಲಾರಿಯಿಂದ ಮಣ್ಣು ತುಂಬಿಸುತ್ತಿದ್ದಾರೆ. ಇದರಿಂದಾಗಿ ಮತ್ತೆ ಪ್ರವಾಹ ಬಂದಾಗ ಅಕ್ಕಪಕ್ಕದ ಮನೆಗಳು ಮುಳುಗುತ್ತವೆ ಎಂದು ವಿರೋಧಿಸಿದ ಸಂತ್ರಸ್ತ ಮಹಿಳೆಯರು, ಈಗಾಗಲೇ ತುಂಬಿರುವ ಮಣ್ಣು ರಾಶಿಯನ್ನು ತೆರವುಗೊಳಿಸಬೇಕು ಎಂದು ಪಟ್ಟುಹಿಡಿದರು.
ಕೂಡಲೇ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ತಗ್ಗು ಪ್ರದೇಶಗಳಲ್ಲಿ ಯಾರೂ ಕೂಡ ಮಣ್ಣು ತುಂಬಿಸಲು ಅವಕಾಶ ಕೊಡಬಾರದು. ಕಾವೇರಿ ಪ್ರವಾಹದಿಂದಾಗಿ ಕಳೆದ ಮೂರು ವರ್ಷಗಳಿಂದಲೂ ನದಿ ಪಾತ್ರದ ತಗ್ಗು ಪ್ರದೇಶಗಳ ಜನರು ಅನುಭವಿಸುವ ನರಕ ಯಾತನೆಯನ್ನು ಜಿಲ್ಲಾಧಿಕಾರಿಗಳು ಅರಿಯಬೇಕು ಎಂದು ಗಂಧದಕೋಟಿ ನಿವಾಸಿಗಳಾದ ಡಿ.ಎಂ.ಲೀಲಾವತಿ, ಗೀತಾ ಧರ್ಮಪ್ಪ, ಮೀನಾ ಕುಮಾರಿ, ಚೋಂದಮ್ಮ, ರತ್ನಮ್ಮ, ಉಷಾ, ಜಯಕುಮಾರಿ, ಕೊಂಪುಳಿರ ನಂಜುಂಡ, ಶಿವಪ್ಪ ಮೊದಲಾದವರು ಆಗ್ರಹಿಸಿದರು.
ನೆರೆ ಸಂತ್ರಸ್ತ ನರಸಯ್ಯ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕಾವೇರಿ ನೆರೆ ನಮಗೆ ಸಾಮಿಲ್ ವ್ಯವಹಾರವನ್ನೇ ಸಾಯಿಸಿದೆ. ಲಕ್ಷಾಂತರ ರೂ ಬೆಲೆ ಬಾಳುವ ವಿದ್ಯುತ್ ಯಂತ್ರಾಗಾರಗಳು, ಮರ ಕಟಾವಿನ ಯಂತ್ರಗಳು ಹಾಳಾಗಿವೆ. ಇಲ್ಲಿ ತೋಡು ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಆಗಬೇಕು.
ನಾನು ನನ್ನ ಜಾಗದ ಒಳಗಿನ ತಗ್ಗು ಪ್ರದೇಶಕ್ಕೆ ಮಣ್ಣು ಹಾಕಿಸುತ್ತಿದ್ದೇನೆ ಹೊರತು ಯಾರಿಗೂ ತೊಂದರೆ ಕೊಡುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲೀಲಾವತಿ ಮಾತನಾಡಿ, ಈ ಭಾಗದಲ್ಲಿ ಮೇಲಿಂದ ಕಾಟಿಕೆರೆ ನೀರು ಹರಿಯುವ ರಾಜಕಾಲುವೆಯನ್ನು ಎಲ್ಲರೂ ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಜೊತೆಗೆ ಕಾವೇರಿ ಪ್ರವಾಹ ಇಲ್ಲಿಗೂ ವ್ಯಾಪಿಸುತ್ತಿದ್ದು ಮೂವತ್ತಕ್ಕೂ ಹೆಚ್ಚು ಮನೆಗಳು ಜಲಾವೃತಗೊಳ್ಳುತ್ತಿವೆ. ಕೂಡಲೇ ಜಿಲ್ಲಾಡಳಿತ ನಮಗೆ ಶಾಶ್ವತವಾದ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. - ಮೂರ್ತಿ