ಪೆÇನ್ನಂಪೇಟೆ, ಆ.17: ಜಿಲ್ಲೆಯ ಹಲವೆಡೆ ಮೀನು- ಮಾಂಸವನ್ನು ಕೆಲ ವರ್ತಕರು ಮನಸ್ಸಿಗೆ ಬಂದ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಜನರನ್ನು ಸುಲಿಗೆ ನಡೆಸುವ ದಂಧೆಯಾಗಿ ಮಾರ್ಪಟ್ಟಿದ್ದು, ಕೆಲ ಪಿಡಿಒಗಳು ವರ್ತಕರೊಂದಿಗೆ ಶಾಮೀಲಾಗಿದ್ದಾರೆ ಎಂದು ಜಿ.ಪಂ. ಸದಸ್ಯ ಸಿ.ಕೆ.ಬೋಪಣ್ಣ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಪ್ರದೇಶದಲ್ಲಿ ಮೀನು-ಮಾಂಸಕ್ಕೆ ವಿವಿಧ ರೀತಿಯ ದರ ನಿಗದಿಪಡಿಸಿಕೊಂಡು ಗ್ರಾಹಕರನ್ನು ಮೋಸ ಮಾಡುತ್ತಿದ್ದಾರೆ. ಇದು ವೀರಾಜಪೇಟೆ ತಾಲೂಕಿನಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಈ ದಂಧೆಯಲ್ಲಿ ಕೆಲವರು ಕೈಜೋಡಿಸಿರುವುದು ಕಂಡುಬಂದಿದೆ. ಈ ಬೆಲೆ ತಾರತಮ್ಯದಿಂದಾಗಿ ಜನತೆ ನಷ್ಟ ಅನುಭವಿಸುತ್ತಿದ್ದು, ಸಾರ್ವಜನಿಕರ ಮೌನವೇ ಈ ದಂಧೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರಲ್ಲದೆ, ಈ ದಂಧೆಗೆ ಕಡಿವಾಣ ಹೇರಲು ಜಿಲ್ಲೆಯಾದ್ಯಂತ ಏಕರೂಪದ ಮಾರುಕಟ್ಟೆ ಬೆಲೆ ನಿಗದಿಗೊಳಿಸುವಂತೆ ಸಂಬಂಧಪಟ್ಟವರಿಗೆ ಆಗ್ರಹಿಸಿದ್ದಾರೆ.
ಗೋಣಿಕೊಪ್ಪಲಿನಲ್ಲಿ ಹಂದಿ ಮಾಂಸಕ್ಕೆ ಕೆ.ಜಿ.ವೊಂದಕ್ಕೆ ರೂ. 220 ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ ವೀರಾಜಪೇಟೆಯಲ್ಲಿ ಕೆ.ಜಿ.ವೊಂದಕ್ಕೆ ರೂ. 160ರಂತೆ ದೊರೆಯುತ್ತಿದೆ. ಅದೇ ರೀತಿ ಕೋಳಿ ಮತ್ತು ಕುರಿ ಮಾಂಸದ ಬೆಲೆಯಲ್ಲಿಯೂ ವ್ಯತ್ಯಾಸವಿದೆ. ಅಲ್ಲದೆ ವಿವಿಧ ಹೆಸರಿನ ಮೀನಿನ ಮಾರಾಟ ಬೆಲೆಯಲ್ಲಿಯೂ ವ್ಯತ್ಯಾಸ ಕಂಡುಬರುತ್ತಿದೆ ಎಂದು ಬೋಪಣ್ಣ ವಿವರಿಸಿದರು.