ಸೋಮವಾರಪೇಟೆ, ಆ. 17: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣ ಮಕ್ಕಳ ಗುಡಿ ಬೆಟ್ಟ ಇದೀಗ ಮದ್ಯಪ್ರಿಯರ ಮೋಜಿನ ತಾಣವಾಗಿ ಮಾರ್ಪಟ್ಟಿದ್ದು, ಅಶುಚಿತ್ವದ ವಾತಾವರಣ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರವಾಸಿ ಕೇಂದ್ರವಾಗಿ ಜನಮನ್ನಣೆ ಗಳಿಸುತ್ತಿರುವ ಮಕ್ಕಳಗುಡಿ ಬೆಟ್ಟ ಪ್ರಕೃತಿ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರವಾಸಿ ತಾಣ ಮದ್ಯ ವ್ಯಸನಿಗಳ ಮೋಜುಮಸ್ತಿನ ಕೇಂದ್ರವಾಗಿ ಬದಲಾಗುತ್ತಿದ್ದು, ನಿರ್ವಹಣೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ನಿಸರ್ಗದ ಸವಿಯನ್ನು ಸವಿಯಲು ಬೆಟ್ಟದ ತುದಿಯಲ್ಲಿ ವೀಕ್ಷಣಾ ಗೋಪುರ ನಿರ್ಮಿಸಲಾಗಿದ್ದು, ಇಲ್ಲಿ ಮದ್ಯ ಸೇವಿಸಿ ಬಾಟಲಿಗಳನ್ನು ಒಡೆದು ಹಾಕಲಾಗಿದೆ. ನೀರಿನ ತೊಟ್ಟಿಯಲ್ಲಿಯೂ ಬಾಟಲಿಯನ್ನು ಹಾಕಿ ಕಲುಷಿತಗೊಳಿಸಲಾಗಿದೆ. ಈ ಬಗ್ಗೆ ಕಿರಗಂದೂರು ಗ್ರಾಮ ಪಂಚಾಯಿತಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ಪ್ರಕೃತಿ ಪ್ರಿಯರು ಆಗ್ರಹಿಸಿದ್ದಾರೆ.
ಇದರೊಂದಿಗೆ ಪ್ರವಾಸಿ ತಾಣ ಅಕ್ರಮ ಜೂಜು ಅಡ್ಡೆಯ ಕೇಂದ್ರವಾಗಿಯೂ ಪರಿವರ್ತಿತವಾಗಿದ್ದು, ಪೊಲೀಸ್ ಇಲಾಖೆ ಆಗಾಗ್ಗೆ ಗಸ್ತು ಹಾಕಬೇಕೆಂದು ಒತ್ತಾಯಿಸಿದ್ದಾರೆ.