ಕುಶಾಲನಗರ, ಆ. 17: ಸುಂಟಿಕೊಪ್ಪ ಹೋಬಳಿಯ ಕಾನ್ ಬೈಲ್ ಬೈಚನಹಳ್ಳಿ, ಅಂದಗೋವೆ, ಕಲ್ಲೂರು ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ 3 ಕಾಡಾನೆಗಳನ್ನು ಸುರಕ್ಷಿತವಾಗಿ ಅತ್ತೂರು ರಕ್ಷಿತಾರಣ್ಯಕ್ಕೆ ಅಟ್ಟಲಾಯಿತು.

ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ಅನಿಲ್ ಡಿ.ಸೋಜ ಮತ್ತು ಇಲಾಖೆಯ ಸಿಬ್ಬಂದಿಗಳು, ಕ್ಷಿಪ್ರ ಕಾರ್ಯಾಚರಣೆ ತಂಡ ಸೇರಿದಂತೆ ಕಾಡಾನೆ ಕಾರ್ಯಾಚರಣೆ ತಂಡದ ಸದಸ್ಯರು ಬೆಳಿಗ್ಗೆ 10 ಗಂಟೆಯಿಂದ ಸಂಜೆ ತನಕ ಅಂದಗೋವೆ ಮತ್ತಿತರ ಕಡೆ ತೋಟಗಳಿಂದ 3 ಆನೆಗಳನ್ನು ಅತ್ತೂರು ಅರಣ್ಯ ಕಡೆಗೆ ಅಟ್ಟುವ ಕಾರ್ಯಾಚರಣೆ ನಡೆಸಿದರು.

ಇನ್ನೊಂದು ಕಾರ್ಯಾಚರಣೆ ತಂಡ ಉಪ ವಲಯ ಅರಣ್ಯಾಧಿಕಾರಿಗಳಾದ ಕನ್ನಂಡ ರಂಜನ್, ಮಹದೇವ ನಾಯಕ ನೇತೃತ್ವದಲ್ಲಿ ಮೋದೂರು ವ್ಯಾಪ್ತಿಯ ತೋಟಗಳಿಂದ ಒಂದು ಆನೆಯನ್ನು ಮೀನುಕೊಲ್ಲಿ ಅರಣ್ಯಕ್ಕೆ ಸೇರಿಸಲಾಯಿತು. ಮೋದೂರು ವ್ಯಾಪ್ತಿಯಲ್ಲಿ ತಾ. 18ರಂದು (ಇಂದು) ಕೂಡ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.