ಶನಿವಾರಸಂತೆಯ ಸಿದ್ದರಾಜು ಅವರು ವಿದ್ಯುತ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮಾರ್ಚ್ ತಿಂಗಳಿನಲ್ಲಿ ಮಹಾರಾಷ್ಟ್ರಕ್ಕೆ ತೆರಳಿ ಅಲ್ಲಿ ಅತ್ತೆಯ ಮನೆಯಲ್ಲಿದ್ದ ಮಡದಿ ಜ್ಯೋತಿ ಹಾಗೂ ಐದು ತಿಂಗಳ ಹಸುಗೂಸನ್ನು ತಮ್ಮ ಮನೆಗೆ ಕರೆತಂದಿದ್ದರು. ಮಹಾರಾಷ್ಟ್ರಕ್ಕೆ ಹೋಗಿ ಬಂದುದರಿಂದ ತಮ್ಮ ಆಪ್ತರ ಸಲಹೆ ಮೇರೆಗೆ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡರು. ಮೊದಲ ಬಾರಿಗೆ ನೆಗೆಟಿವ್ ಫಲಿತಾಂಶ ಬಂದರೂ, ಮತ್ತೊಮ್ಮೆ ಪರೀಕ್ಷಿಸಿದಾಗ ಮಡದಿಗೆ ಪಾಸಿಟಿವ್ ಫಲಿತಾಂಶ ಬಂದಿತ್ತು. ಮೂರನೇ ಬಾರಿ ಪರೀಕ್ಷಿಸಿದಾಗ ಮಡದಿಗೆ ನೆಗೆಟಿವ್ ಹಾಗೂ ಸಿದ್ದರಾಜು ಅವರಿಗೆ ಪಾಸಿಟಿವ್ ಫಲಿತಾಂಶ ಬಂದಿತ್ತು. ಹೀಗಾಗಿ ಸಿದ್ದರಾಜು ಅವರು ತಮ್ಮ ಮಡದಿ ಹಾಗೂ ಮಗುವಿನೊಂದಿಗೆ ಆಸ್ಪತ್ರೆಯಲ್ಲಿ 28 ದಿನಗಳನ್ನು ಕಳೆಯ ಬೇಕಾಗಿ ಬಂತು ಈ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಎಲ್ಲರೂ ತಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡುದಾಗಿ ಸಿದ್ದರಾಜು ಹೇಳುತ್ತಾರೆ. ಆಸ್ಪತ್ರೆ ಯಿಂದ ತಾವು ಮನೆಗೆ ಬಂದ ಬಳಿಕ ಆರೋಗ್ಯಾಧಿಕಾರಿ ಗಳ ಸಲಹೆಯ ಮೇರೆಗೆ 14 ದಿನಗಳ ಕಾಲ ಮನೆಯಲ್ಲಿ ಇರಬೇಕಾಗಿ ಬಂತು ಎಂದ ಸಿದ್ದರಾಜು ಅವರು ಕೊರೊನಾಕ್ಕೆ ಯಾರೂ ಹೆದರಬೇಕಾಗಿಲ್ಲ, ಬದಲಿಗೆ ಆರೋಗ್ಯ ಇಲಾಖೆಯ ನಿರ್ದೇಶನಗಳನ್ನು ಪಾಲಿಸಿದರೆ ಸಾಕು ಎಂದು ಹೇಳುತ್ತಾರೆ.