ಮಡಿಕೇರಿ, ಆ. 17: ಕೊಡಗಿನಲ್ಲಿ ಇದುವರೆಗೆ ಶೇ. 62.74 ರಷ್ಟು ಈ ಸಾಲಿನ ಕೃಷಿ ಚಟುವಟಿಕೆಯಲ್ಲಿ ಸಾಧನೆ ಕಂಡು ಬಂದಿದೆ. ಉತ್ತರಕೊಡಗಿನ ಹಚ್ಚಿನಾಡು, ಹಮ್ಮಿಯಾಲ, ಮುಟ್ಲು, ಕುಂಬಾರಗಡಿಗೆ, ಸೂರ್ಲಬ್ಬಿ, ಮಂಕ್ಯ ಇನ್ನಿತರ ಗ್ರಾಮೀಣ ಪ್ರದೇಶಗಳಲ್ಲಿ ಭತ್ತದ ನಾಟಿ ಕೆಲಸ ಪೂರ್ಣಗೊಂಡಿದೆ. ಅಂತೆಯೇ ಬಯಲು ಸೀಮೆಯಲ್ಲಿ ಬಹುತೇಕ ಮುಸುಕಿನ ಜೋಳ ಬಿತ್ತನೆ ಕಾರ್ಯ ಮುಕ್ತಾಯಗೊಂಡಿದೆ. ದಕ್ಷಿಣ ಕೊಡಗು ಸೇರಿದಂತೆ ಬಹುತೇಕ ಕಡೆಗಳಲ್ಲಿ ಭತ್ತದ ನಾಟಿ ಕೆಲಸ ಪ್ರಗತಿಯಲ್ಲಿದೆ. ಕೃಷಿ ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ ಸರಾಸರಿ 95 ಇಂಚು ಮಳೆ ಪ್ರಸಕ್ತ ಸಾಲಿನಲ್ಲಿ ದಾಖಲಾಗಿವೆ. ಈ ವೇಳೆ 2018ರಲ್ಲಿ 134.52 ಇಂಚು ಮಳೆಯಾದರೆ, 2019ರಲ್ಲಿ 82.85 ಇಂಚು ಹಾಗೂ ಪ್ರಸ್ತುತ 67.85 ಇಂಚು ದಾಖಲಾಗಿದೆ ಎಂದು ಅಂಕಿಅಂಶದಿಂದ ಗೊತ್ತಾಗಿದೆ.ಕೃಷಿ ಪ್ರಗತಿ : ಮಡಿಕೇರಿ ತಾಲೂಕಿನಲ್ಲಿ 6500 ಹೆಕ್ಟೇರ್ ಭತ್ತ ಬೆಳೆಯ ಗುರಿ ಹೊಂದಿದ್ದು, ಇದುವರೆಗೆ 3600 ಹೆಕ್ಟೇರ್ ನಾಟಿಯೊಂದಿಗೆ ಇದೀಗ ಮಳೆಯ ನಡುವೆಯೂ ರೈತರು ಬಿರುಸಿನಿಂದ ಕಾಯಕನಿರತರಾಗಿದ್ದಾರೆ. ಇನ್ನು ಸೋಮವಾರಪೇಟೆ ತಾಲೂಕಿನಲ್ಲಿ 14 ಸಾವಿರ ಹೆಕ್ಟೇರ್ ಕೃಷಿಯ ಗುರಿ ಹೊಂದಲಾಗಿದೆ. ಈ ಪೈಕಿ ಮಳೆಯಾಶ್ರಿತ ನಾಟಿ ಕಾರ್ಯವು 7110 ಹೆಕ್ಟೇರ್‍ನಲ್ಲಿ ಪೂರ್ಣಗೊಂಡಿದೆ. ಹಾರಂಗಿ ಜಲಾಶಯ ನೀರಿನಿಂದ 1250 ಹೆಕ್ಟೇರ್ ಭತ್ತ ಹಾಗೂ ಮುಸುಕಿನ ಜೋಳ ಹಾಗೂ ಇತರ ಕೃಷಿ ಚಟುವಟಿಕೆ ಸಾಗಿದೆ. ಈ ತಾಲೂಕಿನಲ್ಲಿ ಇದುವರೆಗೆ ಒಟ್ಟು 11410 ಹೆಕ್ಟೇರ್ ಪ್ರಗತಿ ಕಂಡು ಬಂದಿದೆ.

ಅಂತೆಯೇ ವೀರಾಜಪೇಟೆ ತಾಲೂಕಿನಲ್ಲಿ 14 ಸಾವಿರ ಹೆಕ್ಟೇರ್ ಮುಂಗಾರು ಬೆಳೆಯ ಗುರಿ ಹೊಂದಲಾಗಿದ್ದು, ಇದುವರೆಗೆ 8140 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಕಾಯಕ ಸಾಗಿದೆ. ಹೀಗೆ ಜಿಲ್ಲೆಯಲ್ಲಿ ಒಟ್ಟು 36900 ಹೆಕ್ಟೇರ್ ಗುರಿಯೊಂದಿಗೆ 23150 ಹೆಕ್ಟೇರ್ ಕೃಷಿ ಕಾರ್ಯ ಮುಗಿದಿದ್ದು, ಶೇ. 62.74 ರಷ್ಟು ಸಾಧನೆ ಕಂಡು ಬಂದಿದೆ.

ತಾಲೂಕುವಾರು ಮಳೆ : ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಜಿಲ್ಲೆಯಲ್ಲಿ ಆಶಾದಾಯಕ ಮಳೆಯೊಂದಿಗೆ, ಆಗಸ್ಟ್ 3 ರಿಂದ ಆರಂಭಗೊಂಡಿರುವ ಆಶ್ಲೇಷಾ ಮಳೆಯು ನಿನ್ನೆ ಕೊನೆಗೊಳ್ಳುವ ತನಕ ನಿರಂತರ ಸುರಿಯುವದರೊಂದಿಗೆ ರೈತ ಸಮುದಾಯದಲ್ಲಿ ಆತಂಕ ಸೃಷ್ಟಿಸಿತ್ತು. ಇಂದಿನಿಂದ ಮಖಾ ಮಳೆಯು ಆರಂಭದೊಂದಿಗೆ ಸ್ವಲ್ಪ ಮಟ್ಟಿಗೆ ಇಳಿಮುಖ ಗೋಚರಿಸಿದೆ. ಇಲಾಖೆಯ ಅಂಕಿ ಅಂಶದಂತೆ ಮಡಿಕೇರಿ ತಾಲೂಕಿನಲ್ಲಿ ಸರಾಸರಿ ಈ ಸಾಲಿನಲ್ಲಿ 95.07 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 105.48 ಇಂಚು ಹಾಗೂ 2018ರಲ್ಲಿ 184.86 ಇಂಚು ಮಳೆಯಾಗಿತ್ತು.

(ಮೊದಲ ಪುಟದಿಂದ) ಸೋಮವಾರಪೇಟೆ : ಇನ್ನು ಸೋಮವಾರಪೇಟೆ ತಾಲೂಕಿನಲ್ಲಿ ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ 46.61 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಈ ವೇಳೆಗೆ 53.88 ಇಂಚು ಹಾಗೂ 2018ರಲ್ಲಿ 73.29 ಇಂಚು ಮಳೆ ದಾಖಲಾಗಿರುವ ಕುರಿತು ಕೃಷಿ ಇಲಾಖೆಯು ಮಾಹಿತಿ ನೀಡಿದೆ.

ವೀರಾಜಪೇಟೆ : ಇನ್ನೊಂದೆಡೆ ವೀರಾಜಪೇಟೆ ತಾಲೂಕಿನಲ್ಲಿ ಈ ವರ್ಷದ ಆರಂಭದಿಂದ ಪ್ರಸಕ್ತ ಅವಧಿಗೆ ಒಟ್ಟು 61.86 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ವೇಳೆಯಲ್ಲಿ 89.21 ಇಂಚು ಹಾಗೂ 2018ರಲ್ಲಿ 112.31 ಇಂಚು ದಾಖಲಾಗಿತ್ತು.

ಬೆಳೆಗಾರರಿಗೂ ಆತಂಕ: ಪ್ರಸಕ್ತ ಸಾಲಿನಲ್ಲಿ ಆರಂಭಿಕವಾಗಿ ಆಶಾದಾಯಕ ಮಳೆಯಿಂದ ಹರ್ಷಗೊಂಡಿದ್ದ ಬೆಳೆಗಾರರು ಮತ್ತು ಸಣ್ಣ ರೈತ ಸಮೂಹ, ಆಗಸ್ಟ್ ಮೊದಲನೆಯ ವಾರದಿಂದ ಇಂದಿನ ತನಕ ಸುರಿದ ಆಶ್ಲೇಷ ಮಳೆಯ ತೀವ್ರತೆಯಿಂದ ಕಂಗೆಟ್ಟಿದ್ದಾರೆ. ಈ ಅವಧಿಯಲ್ಲಿ ಬಿರುನಾಣಿಯಿಂದ ಪುಷ್ಪಗಿರಿ ಶ್ರೇಣಿಯ ಶಾಂತಳ್ಳಿ ತನಕ ಎಲ್ಲೆಡೆ ಕಾಫಿ ಫಸಲು ಉದುರುತ್ತಿರುವದು ಈ ಆತಂಕಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಮಳೆಯಿಂದ ಹೊಳೆ, ತೋಡುಗಳಲ್ಲಿ ಪ್ರವಾಹದೊಂದಿಗೆ ಭತ್ತದ ಗದ್ದೆಗಳಿಗೂ ನೀರು ನುಗ್ಗಿ ಸಸಿಮಡಿ ಮತ್ತು ನಾಟಿ ಅಪಾರ ಪ್ರಮಾಣದಲ್ಲಿ ನಷ್ಟಗೊಂಡಿವೆ.

ಇಲಾಖೆಯಿಂದ ಸಮೀಕ್ಷೆ : ಈ ನಡುವೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ದೇಶನದಂತೆ, ರೈತರ ಎಲ್ಲಾ ರೀತಿಯ ಕೃಷಿ ಫಸಲು ಪ್ರಾಕೃತಿಕ ವಿಕೋಪದಿಂದ ನಷ್ಟವಾಗಿರುವ ಬಗ್ಗೆ ಸಮೀಕ್ಷೆ ಆರಂಭಗೊಂಡಿದೆ. ಸ್ವತಃ ಆಯಾ ಗ್ರಾ.ಪಂ. ಹಾಗೂ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳ ನೇತೃತ್ವದಲ್ಲಿ ಖಾಸಗಿ ಏಜೆನ್ಸಿ ಮಂದಿ ರೈತಕುಟುಂಬಗಳನ್ನು ಖುದ್ದು ಸಂಪರ್ಕಿಸಿ ಸ್ಥಳದಲ್ಲೇ ಮಾಹಿತಿ ಸಂಗ್ರಹಿಸುತ್ತಿರುವದಾಗಿಯೂ ಇಲಾಖೆಯ ಮೂಲಗಳಿಂದ ಗೊತ್ತಾಗಿದೆ.