ಗೂಂಡಾ ಕಾಯ್ದೆಯಡಿ ಬಂಧನ

ಬೆಂಗಳೂರು, ಆ.17 : ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಗಲಭೆ ಕೋರರ ಹೆಡೆಮುರಿ ಕಟ್ಟಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಸ್ವತಃ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದು, ಗಲಭೆ ಮಾಡುವವರನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಗಲಭೆಯಿಂದ ಸಂಭವಿಸಿದ ನಷ್ಟವನ್ನೂ ಅವರಿಂದಲೇ ವಸೂಲಿ ಮಾಡುವಂತೆ ಸೂಚಿಸಿದ್ದು, ಈ ಸಂಬಂಧ ಕೈಗೊಳ್ಳಬೇಕಾದ ಕಾನೂನು ರೀತಿಯ ಕ್ರಮಗಳನ್ನು ಜರುಗಿಸುವಂತೆಯೂ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿಯನ್ನು ಭೇಟಿಯಾದ ಶಾಸಕ

ಬೆಂಗಳೂರು, ಆ.17 : ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಕೆ.ಜಿ.ಹಳ್ಳಿ ಗಲಭೆಯ ಬಗ್ಗೆ ವಿವರ ನೀಡಿದರು. ಘಟನೆಯ ಬಳಿಕ ಮೊದಲ ಬಾರಿಗೆ ಶಾಸಕ ಅರವಿಂದ ಲಿಂಬಾವಳಿ ಜೊತೆ ಬಂದು ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾದ ಅಖಂಡ ಶ್ರೀನಿವಾಸ್, ಗಲಭೆ ಕುರಿತು ಬಿಎಸ್‍ವೈ ಜೊತೆ ಚರ್ಚೆ ನಡೆಸಿದರು. ಈ ಗಲಭೆ ಪ್ರಮುಖ ಕಾರಣ ಯಾರು, ಗಲಭೆ ನಡೆದ ದಿನದಿಂದ ಇಲ್ಲಿಯವರೆಗೂ ಆಗಿರುವ ಬೆಳವಣಿಗೆ, ಪ್ರಕರಣದ ಕುರಿತು ತನಿಖೆ ಬಗ್ಗೆ ಚರ್ಚೆ ಮಾಡಿದ್ದಾರೆ. ಎಸ್‍ಡಿಪಿಐ ಸಂಘಟನೆಯ ಕೈವಾಡ ಹಾಗೂ ಸ್ಥಳೀಯ ನಾಯಕರ ಆಂತರಿಕ ಭಿನ್ನಾಭಿಪ್ರಾಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮುಂದೆ ಯಾವ ರೀತಿ ತನಿಖೆ ನಡೆಸಬೇಕು ಎಂಬುದರ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ. ಬಳಿಕ ಮಾತನಾಡಿದ ಅಖಂಡ ಶ್ರೀನಿವಾಸ ಮೂರ್ತಿ, ಮುಖ್ಯಮಂತ್ರಿ ಬಳಿ ತಮಗೆ ಭದ್ರತೆ ಹೆಚ್ಚಳಕ್ಕೆ ಮನವಿ ಮಾಡಿದ್ದೇನೆ. ಗಲಭೆಯ ಹಿಂದೆ ಯಾರೇ ತಪ್ಪಿತಸ್ಥರಿದ್ದರೂ ಅವರನ್ನು ಬಂಧಿಸಲು ಮನವಿ ಮಾಡಿದ್ದೇನೆ ಎಂದರು.

ಭಾರತದ ಜಿಡಿಪಿ ಶೇ.16.5 ಕುಸಿತ

ನವದೆಹಲಿ, ಆ.17 : ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.16.5 ರಷ್ಟು ಕುಸಿತ ಕಾಣಲಿದೆ ಎಂದು ಸ್ಟೇಟ್ ಬ್ಯಾಂಕ್ ನ ಸಂಶೋಧನಾ ವರದಿ ಇಕೋವ್ರಾಪ್ ಅಂದಾಜಿಸಿದೆ. ಮೇ ತಿಂಗಳಲ್ಲಿ ಇಕೋವ್ರಾಪ್, 2020-21 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯನ್ನು ಶೇ.20 ರಷ್ಟು ಕುಸಿಯಲಿದೆ ಎಂದು ಅಂದಾಜಿಸಿತ್ತು. ಈಗ ಪರಿಷ್ಕೃತ ಅಂದಾಜಿನಲ್ಲಿ ಈಗಿನ ಅಸ್ಥಿರತೆಯ ನಡುವೆಯೂ ಶೇ.16.5 ರಷ್ಟು ಕುಸಿತ ಕಾಣಲಿದೆ ಎಂದು ವಿಶ್ಲೇಷಿಸಿದೆ. ಹಣಕಾಸು- ಹಣಕಾಸೇತರ ಕಂಪನಿಗಳ ಫಲಿತಾಂಶಗಳು ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಾಗಿದ್ದು, 2021 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಾರ್ಪೊರೇಟ್ ಜಿವಿಎ ನಲ್ಲಿನ ಡಿಗ್ರೋಥ್ ರೆವಿನ್ಯೂ ಡಿಗ್ರೋತ್ ಗಿಂತ ಉತ್ತಮವಾಗಿದೆ. ಈ ವರೆಗೂ 1,000 ಸಂಸ್ಥೆಗಳು ಮೊದಲ ತ್ರೈಮಾಸಿದ ತಮ್ಮ ಫಲಿತಾಂಶವನ್ನು ಪ್ರಕಟಿಸಿವೆ.

ಸೇನೆ ದಾಳಿಗೆ ಲಷ್ಕರ್ ಕಮಾಂಡರ್ ಬಲಿ

ಶ್ರೀನಗರ, ಆ.17 : ಬಾರಾಮುಲ್ಲಾದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಉಗ್ರರ ದಾಳಿಗೆ ಸಿಆರ್‍ಪಿಎಫ್‍ನ ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್ ಹುತಾತ್ಮರಾದ ಬೆನ್ನಲ್ಲೇ ಸೇನೆ ಇದೀಗ ಲಷ್ಕರ್ ಕಮಾಂಡರ್ ಉಗ್ರ ಸಜ್ಜದ್ ನನ್ನು ಹೊಡೆದುರುಳಿಸಿದೆ. ಸೇನಾ ಮೂಲಗಳ ಪ್ರಕಾರ ಎನ್ ಕೌಂಟರ್ ನಲ್ಲಿ ಭಾರತೀಯ ಯೋಧರು ಲಷ್ಕರ್ ಎ ತೊಯ್ಬಾದ ಉನ್ನತ ಕಮಾಂಡರ್ ಸಜ್ಜಾದ್‍ನನ್ನು ಕೊಂದು ಹಾಕಿದ್ದಾರೆ. ಈ ಬಗ್ಗೆ ಜಮ್ಮುಕಾಶ್ಮೀರದ ಐಜಿ ವಿಜಯ್ ಕುಮಾರ್ ಅವರು ಮಾಹಿತಿ ನೀಡಿದ್ದು, ಲಷ್ಕರ್ ಎ ತೊಯ್ಬಾದ ಸಜ್ಜಾದ್ ಅಲಿಯಾಸ್ ಹೈದರ್‍ನನ್ನು ಹತ್ಯೆ ಮಾಡಲಾಗಿದೆ. ಇದು ಭದ್ರತಾ ಪಡೆ ಮತ್ತು ಪೊಲೀಸರ ಮಹತ್ವದ ಸಾಧನೆ ಎಂದು ಹೇಳಿದ್ದಾರೆ. ಸಜ್ಜದ್ ಹಾಗೂ ಇನ್ನೋರ್ವ ಉಗ್ರನನ್ನು ಹತ್ಯೆ ಮಾಡಲಾಗಿದ್ದು, ಮೃತರ ಬಳಿ ಇದ್ದ ಒಂದು ಎಕೆ-47 ರೈಫಲ್ ಮತ್ತು ಎರಡು ಪಿಸ್ತೂಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಉಗ್ರನಿಗಾಗಿ ಹುಡುಕಾಟ ನಡೆದಿದೆ ಎಂದು ಸಿಆರ್‍ಪಿಎಫ್ ತಿಳಿಸಿದೆ. ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದಲ್ಲಿ ಇಂದು ಬೆಳಗ್ಗೆಯಿಂದಲೂ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್‍ಕೌಂಟರ್ ನಡೆಯುತ್ತಿದೆ. ಉಗ್ರರ ದಾಳಿಗೆ ಸಿಆರ್‍ಪಿಎಫ್‍ನ ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್ ಹುತಾತ್ಮರಾಗಿದ್ದರು.

ಆ.20ಕ್ಕೆ ಸಿಇಟಿ ಫಲಿತಾಂಶ

ಬೆಂಗಳೂರು, ಆ.17 : ಉನ್ನತ ಶಿಕ್ಷಣ ಸಚಿವ, ಡಿಸಿಎಂ ಅಶ್ವತ್ಥ ನಾರಾಯಣ ಮಾತನಾಡಿ ಆ.20ಕ್ಕೆ ಸಿಇಟಿ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ. ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ಸೀಟುಗಳ ಶುಲ್ಕ ಏರಿಕೆ ಇರುವುದಿಲ್ಲ. ಸೀಟು ಹಂಚಿಕೆ ಸಹ ಕಳೆದ ಸಾಲಿನಲ್ಲಿರುವಂತೆಯೇ ಮುಂದುವರಿಯಲಿದೆ ಎಂದು ಸಚಿವರು ಹೇಳಿದ್ದಾರೆ. ಕಳೆದ ವರ್ಷ ಶೇ.33ರಷ್ಟು ಶುಲ್ಕ ಏರಿಕೆ ಮಾಡಲಾಗಿತ್ತು, ಈ ಸಾಲಿನಲ್ಲಿ ಯಾವ ಶುಲ್ಕ ಏರಿಕೆಯಾಗಲಿ, ಸೀಟು ಹಂಚಿಕೆಯಲ್ಲಿ ವ್ಯತ್ಯಾಸವಾಗಲಿ ಇಲ್ಲ ಎಂದು ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ. ಅಕ್ಟೋಬರ್ ನಲ್ಲಿ ಕೌನ್ಸಲಿಂಗ್ ನಡೆಸಲಾಗುತ್ತದೆ ಎಂದೂ ಅವರು ಇದೇ ವೇಳೆ ತಿಳಿಸಿದರು.

ಡಾ.ಸ್ನೇಹ ಅತ್ಯುತ್ತಮ ಮಹಿಳಾ ಉದ್ಯಮಿ

ಬೆಂಗಳೂರು, ಆ.17 : ಹಾಸನದ ಅಪ್ಪಟ ಗ್ರಾಮೀಣ ಪ್ರತಿಭೆ ಡಾ.ಸ್ನೇಹ ರಾಕೇಶ್ ಬ್ಯುಸಿನೆಸ್ ಮಿಂಟ್ ನಿಂದ ಅತ್ಯುತ್ತಮ ಉದಯೋನ್ಮುಖ ಮಹಿಳಾ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ. ಗ್ರಾಮೀಣ ಸೊಗಡಿನ ಡಾ.ಸ್ನೇಹ ರಾಕೇಶ್ ಈ ಮೂಲಕ ದೊಡ್ಡ ಕನಸುಗಳೊಂದಿಗೆ ಯಶಸ್ಸಿನ ಶಿಖರವೇರುತ್ತಿದ್ದಾರೆ. ಇವರ ಸಾಧನೆಯನ್ನು ಜಾಗತಿಕ ಪೋಬ್ಸ್ ಪತ್ರಿಕೆ ಗುರುತಿಸಿದೆ. ತಂತ್ರಜ್ಞಾನ ಉದ್ಯಮ ರಂಗದಲ್ಲಿ ಮಹಿಳಾ ಉದ್ಯಮಿಯಾಗಿ ಯಶಸ್ಸಿನ ಪಥದಲ್ಲಿ ಚಲಿಸುತ್ತಿದ್ದಾರೆ. ಹಾಸನದಿಂದ ಬೆಲ್ಜಿಯಂ ವರೆಗೆ ಸಂಚರಿಸಿ ತನ್ನದೇ ಆದ ಹೆಗ್ಗುರುತು ಮೂಡಿಸಿರುವ ಡಾ. ಸ್ನೇಹ ರಾಕೇಶ್, ತಂತ್ರಜ್ಞಾನ ಕೈಗಾರಿಕಾ ವಲಯದಲ್ಲಿ ಉನ್ನತ ಸ್ಥಾನ ತಲುಪಿದ್ದಾರೆ. ಸ್ಪರ್ಧೆಯಿಂದ ಹಿಂದೆ ಸರಿಯಬಾರದು, ವಿಶ್ವಾಸ ಕಳೆದುಕೊಳ್ಳಬಾರದು' ಎನ್ನುವುದೇ ಇವರ ಯಶೋಗಾಥೆಯ ಮೂಲ ಮಂತ್ರವಾಗಿದೆ.

ಗಾಯಕ ಪಂಡಿತ್ ಜಸ್‍ರಾಜ್ ನಿಧನ

ನವದೆಹಲಿ, ಆ.17 : ವಿಶ್ವವಿಖ್ಯಾತ ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಜಸ್‍ರಾಜ್(90) ಅಮೆರಿಕದ ನ್ಯೂ ಜರ್ಸಿಯಲ್ಲಿ ಸೋಮವಾರ ನಿಧನರಾದರು. 80 ವರ್ಷಗಳ ಕಾಲ ಸಂಗೀತ ವೃತ್ತಿಜೀವನ ನಡೆಸಿದ್ದ ಅವರಿಗೆ ಪದ್ಮಶ್ರೀ(1975), ಪದ್ಮಭೂಷಣ(1990) ಹಾಗೂ ಪದ್ಮವಿಭೂಷಣ(2000), ಸಂಗೀತ ನಾಟಕ ಅಕಾಡೆಮಿಪ್ರಶಸ್ತಿ (1987), .1997-98ರಲ್ಲಿ ಕಾಳಿದಾಸ ಸಮ್ಮಾನ್ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಗೌರವಗಳು ಸಂದಿದ್ದವು. ಹರಿಯಾಣದ ಹಿಸ್ಸಾರ್ ನವರಾದ ಜಸ್‍ರಾಜ್ ಜೈಪುರ ಅತ್ರೌಲಿ ಘರಾನಾದ 83 ವರ್ಷದ ಕಿಶೋರಿ ಅಮೋಂಕರ್ ಅವರನ್ನೊಳಗೊಂಡ ಶಾಸ್ತ್ರೀಯ ಗಾಯಕರ ಕೊನೆಯ ಪೀಳಿಗೆಯವರಾಗಿದ್ದ ಜಸರಾಜ್ ಮೇವಾಟಿ ಘರಾಣದ ಅದ್ವರ್ಯುರಾಗಿದ್ದರು. ಅವರನ್ನು ಅವರ ತಂದೆ ಸಂಗೀತ ಜಗತ್ತಿಗೆ ಪರಿಚಯಿಸಿದ್ದರು, ನಂತರ ಅವರ ಹಿರಿಯ ಸಹೋದರ ಪಂಡಿತ್ ಪ್ರತಾಪ್ ನಾರಾಯಣ್ ಅವರ ಸಹಾಯದಿಂದ ತಬಲಾ ಜೊತೆಗಾರರಾಗಿ ತರಬೇತಿ ಪಡೆದರು.