ಮಡಿಕೇರಿ, ಆ.16:ಕಳೆದ 2 ವರ್ಷಗಳಿಂದ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಲಕ್ಷ್ಮೀಪ್ರಿಯ ಅವರು ಹೆರಿಗೆ ರಜೆಯ ಮೇಲೆ ತೆರಳುತ್ತಿದ್ದು ಶುಕ್ರವಾರ ಅವರಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು. ನಗರದ ಜಿ.ಪಂ.ಸಭಾಂಗಣದಲ್ಲಿ ಜಿಲ್ಲಾಡಳಿತ, (ಮೊದಲ ಪುಟದಿಂದ)ಜಿಲ್ಲಾ ಪಂಚಾಯಿತಿ ವತಿಯಿಂದ ಹೃದಯ ಸ್ಪರ್ಶಿಯಾಗಿ ಶಾಲೂ, ಫಲ-ತಾಂಬೂಲ ಮತ್ತು ಉಡುಗೊರೆ ನೀಡಿ ಸನ್ಮಾನಿಸಲಾಯಿತು.ಬೀಳ್ಕೊಡುಗೆ ಸ್ವೀಕರಿಸುವುದಕ್ಕೂ ಮೊದಲು ಮಾತನಾಡಿದ ಕೆ.ಲಕ್ಷ್ಮೀಪ್ರಿಯ ಅವರು ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಎಲ್ಲರ ಸಹಕಾರದಿಂದ 2 ವರ್ಷಗಳ ಕಾಲ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು ಎಂದು ಹೇಳಿದರು. ಜಿಲ್ಲಾಡಳಿತದೊಂದಿಗೆ ಸದಾ ಸಮನ್ವಯತೆ ಸಹಕಾರದಿಂದ ಕರ್ತವ್ಯ ನಿರ್ವಹಿಸಲಾಯಿತು. ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಕುಟುಂಬದವರಂತೆ ಕರ್ತವ್ಯ ನಿರ್ವಹಿಸಿದ್ದು ಸ್ಮರಣೀಯ ಎಂದರು.

ಜಿಲ್ಲೆಯಲ್ಲಿ ಸ್ವಚ್ಛ ಭಾರತ ಅಭಿಯಾನ ಮತ್ತು ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಉತ್ತಮ ಪ್ರಗತಿ ಸಾಧಿಸಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ, ಜಿಲ್ಲಾಡಳಿತದೊಂದಿಗೆ ಜಿಲ್ಲಾ ಪಂಚಾಯತ್ ಸಿಇಒ ಅವರು ಹೊಂದಾಣಿಕೆಯಿಂದ ಕೆಲಸ ಮಾಡಿದರು. ಈ ನಿಟ್ಟಿನಲ್ಲಿ ಹಿಂದಿನ ಎಸ್‍ಪಿ ಯಾಗಿದ್ದ ಸುಮನ್ ಮತ್ತು ಸಿಇಒ ಲಕ್ಷ್ಮಿಪ್ರಿಯ ಸಂಬಂಧಿಕರಂತೆ ಕರ್ತವ್ಯ ನಿರ್ವಹಿಸಿದ್ದು ವಿಶೇಷ ಎಂದರು. 2019 ರಲ್ಲಿ ಪ್ರಕೃತಿ ವಿಕೋಪದಿಂದ ಭಾಗಮಂಡಲದಲ್ಲಿ ಉಂಟಾದ ಭೂಕುಸಿತ ಸಂದರ್ಭದಲ್ಲಿನ ಘಟನೆಯನ್ನು ಜಿಲ್ಲಾಧಿಕಾರಿ ಸ್ಮರಿಸಿದರು. ಜಿ.ಪಂ. ಉಪಕಾರ್ಯದರ್ಶಿ ಗುಡೂರು ಭೀಮಸೇನಾ ಅವರು ಮಾತನಾಡಿ ಕೆ.ಲಕ್ಷ್ಮಿಪ್ರಿಯ ಅವರದ್ದು ತಾಯಿ ಹೃದಯ, ಮಾತೃ ಸ್ವರೂಪಿಣಿ ಎಂದು ವರ್ಣಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಮಾತನಾಡಿ, ತಾಳ್ಮೆ, ಸಹನೆ ಮತ್ತು ಸಂಯಮಕ್ಕೆ ಮತ್ತೊಂದು ಹೆಸರೇ ಲಕ್ಷ್ಮೀಪ್ರಿಯ ಎಂದು ಬಣ್ಣಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಐಟಿಡಿಪಿ ಇಲಾಖಾಧಿಕಾರಿ ಶಿವಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ, ಜಿ.ಪಂ ಯೋಜನಾ ನಿರ್ದೇಶಕ ಶ್ರೀಕಂಠಮೂರ್ತಿ, ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಬಿ.ಬಿ ಪುಷ್ಪಾವತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರುಂಧತಿ, ತಾ.ಪಂ.ಇಒಗಳಾದ ಲಕ್ಷ್ಮೀ, ಸುನೀಲ್ ಕುಮಾರ್, ಷಣ್ಮುಗ ಅವರುಗಳು ಕೆ.ಲಕ್ಷ್ಮೀಪ್ರಿಯ ಅವರ ಕರ್ತವ್ಯ ಪ್ರಜ್ಞೆ ಬಗ್ಗೆ ಗುಣಗಾನ ಮಾಡಿದರು.