ಕಣಿವೆ, ಆ. 16: ಇಲ್ಲಿಗೆ ಸಮೀಪದ ಸೀಗೆಹೊಸೂರು ಗ್ರಾಮದ ಎಸ್.ಎಸ್.ಪಾಲಾಕ್ಷ ಎಂಬವರು 2019ರಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ನಡೆಸಿದ ಪರೀಕ್ಷಾ ನೇಮಕಾತಿಯಲ್ಲಿ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. (ಮೊದಲ ಪುಟದಿಂದ) ಸೀಗೆಹೊಸೂರು ಗ್ರಾಮದ ರೈತ ಶಿವಣ್ಣ ಮತ್ತು ಲಲಿತಮ್ಮ ಅವರ ಪುತ್ರರಾಗಿರುವ ಇವರು, ಕಳೆದ 2006 ರಿಂದ ಮಡಿಕೇರಿ ಹಾಗೂ ಬೆಂಗಳೂರು ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಮೊಕದ್ದಮೆಗಳ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಇವರು ಇದೀಗ ತಾ. 14 ರಂದು ಜಿಲ್ಲಾ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ.

ಈ ಸಂದರ್ಭ ಭೇಟಿಯಾದ ‘ಶಕ್ತಿ’ಯೊಂದಿಗೆ ಮಾತನಾಡಿದ ಪಾಲಾಕ್ಷ ಅವರು, ರಾಜ್ಯ ಉಚ್ಚನ್ಯಾಯಾಲಯ ಕರೆದಿದ್ದ ನೇಮಕಾತಿಯಲ್ಲಿ 1500 ಮಂದಿ ಭಾಗಿಯಾಗಿದ್ದರು. ಪ್ರಾಥಮಿಕ ಪರೀಕ್ಷೆಯಲ್ಲಿ 50 ಮಂದಿ ನೇಮಕವಾಗಿದ್ದರು. ಬಳಿಕ ದ್ವಿತೀಯ ಹಂತದ ಪರೀಕ್ಷೆಯಲ್ಲಿ ನೇಮಕವಾದ 8 ಮಂದಿಯ ಪೈಕಿ ನಾನು ಕೂಡ ಓರ್ವ ಎಂದು ಸಂತಸ ವ್ಯಕ್ತಪಡಿಸಿದರು. ಪಾಲಾಕ್ಷ ಅವರ ಪತ್ನಿ ಪೂಜಾ ಕೂಡ ಈ ಕಳೆದ ಒಂದೂವರೆ ವರ್ಷಗಳ ಹಿಂದೆ ಇದೇ ರೀತಿಯ ನೇಮಕಾತಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದು, ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಮಧಾರಿ ಸಮುದಾಯದ ಮೊದಲ ನ್ಯಾಯಾಧೀಶ ದಂಪತಿಗಳು ಎಂಬ ಹೆಗ್ಗಳಿಕೆ ಇವರದ್ದಾಗಿದೆ. -ಮೂರ್ತಿ