ಮಡಿಕೇರಿ, ಆ. 16: ಕಳೆದ ತಾ. 6 ರಂದು ತಲಕಾವೇರಿಯಲ್ಲಿ ದುರಂತದೊಂದಿಗೆ ಭೂಸಮಾಧಿಯಾ ಗಿರುವ, ಅಲ್ಲಿನ ಪ್ರಧಾನ ಅರ್ಚಕ ದಿ. ಟಿ.ಎಸ್. ನಾರಾಯಣಾಚಾರ್ ಅವರ ಪತ್ನಿ ಶಾಂತಾ ಆಚಾರ್ ಹಾಗೂ ಸಹಾಯಕ ಅರ್ಚಕ ಶ್ರೀನಿವಾಸ್ ಪಡಿಲಾಯ ಇವರಿಬ್ಬರ ಬಗ್ಗೆ ಸತತ 11ನೇ ದಿನದ ಶೋಧ ಕಾರ್ಯದಲ್ಲಿ ಯಾವದೇ ಸುಳಿವು ಲಭಿಸಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದ್ದಾರೆ.ಅಲ್ಲದೆ ಇಂದು ಬೆಳಿಗ್ಗೆಯಿಂದ ನಾಲ್ಕೈದು ಕಡೆಗಳಲ್ಲಿ ಕಣ್ಮರೆಯಾಗಿರುವ ಇವರಿಬ್ಬರ ಪತ್ತೆಗಾಗಿ ಎನ್‍ಡಿಆರ್ ಎಫ್, ಎಸ್‍ಡಿಆರ್‍ಎಫ್, ಕೊಡಗು ಪೊಲೀಸ್, ಅರಣ್ಯ ಇಲಾಖೆ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಜಂಟಿಯಾಗಿ ಹುಡುಕಾಟ ನಡೆಸಿದರೂ ಯಾವದೇ ಕುರುಹು ದೊರಕಿಲ್ಲವೆಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.

ಎಸ್‍ಪಿ ಮಾಹಿತಿ: ತಲಕಾವೇರಿಯ ದುರಂತ ಸ್ಥಳದಿಂದ 2 ಕಿ.ಮೀ. ದೂರದಲ್ಲಿ ಈ ಮೊದಲ ಸಹಾಯಕ ಅರ್ಚಕ ರವಿಕಿರಣ್ ಮೃತದೇಹ ಪತ್ತೆಯಾಗಿರುವ ಪ್ರದೇಶದ ಆಸುಪಾಸಿನಲ್ಲಿ ಹಾಗೂ ಕಾವೇರಿ ನದಿ ದಂಡೆಗಳಲ್ಲಿ ಕಣ್ಮರೆಯಾಗಿರುವ ಇಬ್ಬರ ಸುಳಿವಿಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾಗಿ ಎಸ್‍ಪಿ ಕ್ಷಮಾಮಿಶ್ರ ಮಾಹಿತಿ ನೀಡಿದ್ದಾರೆ. ಭಾನುವಾರದ ಶೋಧಕಾರ್ಯದೊಂದಿಗೆ ಸೋಮವಾರ (ಇಂದು) ಕೂಡ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ವಿವರಿಸಿದ್ದಾರೆ.

(ಮೊದಲ ಪುಟದಿಂದ)

ಪರ್ಸ್ ಲಭ್ಯ : ಭಾನುವಾರದ ಶೋಧ ಕಾರ್ಯಾಚರಣೆ ವೇಳೆ ಈ ಮೊದಲು ಪ್ರಧಾನ ಅರ್ಚಕ ನಾರಾಯಣಾಚಾರ್ ಕಳೇಬರ ಗೋಚರಿಸಿರುವ ಪ್ರದೇಶದಿಂದ ಅನತಿ ದೂರದಲ್ಲಿ, ಮೃತರ ಪತ್ನಿ ಶಾಂತಾ ಆಚಾರ್ ಅವರಿಗೆ ಸೇರಿದ ಪರ್ಸ್ ಹಾಗೂ ಮೊಬೈಲ್ ಮತ್ತು ಗುರುತು ಚೀಟಿ ಲಭಿಸಿರುವದಾಗಿ ಭಾಗಮಂಡಲ ಠಾಣಾಧಿಕಾರಿ ಹೆಚ್. ಮಹದೇವ್ ಖಚಿತಪಡಿಸಿದ್ದಾರೆ.