ಮಡಿಕೇರಿ, ಆ. 15: ಅಕ್ರಮವಾಗಿ ಅರಣ್ಯ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ನಾಲ್ವರ ತಂಡವೊಂದು ಬೇಟೆಯಾಡುವ ಪ್ರಯತ್ನ ನಡೆಸಿದ್ದು, ಈ ಸಂದರ್ಭ ಕಾಡುಪ್ರಾಣಿ ಎಂದು ತಿಳಿದು ಹಾರಿಸಿದ ಗುಂಡಿನಿಂದ ವ್ಯಕ್ತಿಯೋರ್ವರು ಬಲಿ ಯಾಗಿದ್ದಾರೆ. ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ.ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಕ್ಕಂದೂರಿನ ಚಂದ್ರಗಿರಿ ಎಂಬಲ್ಲಿ ಈ ಘಟನೆ ನಡೆದಿದೆ. ಕಾಡು ಪ್ರಾಣಿ ಎಂದು ಹಾರಿಸಿದ ಗುಂಡಿಗೆ ಮಡಿಕೇರಿ ತಾಲೂಕು ಲಾರಿ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷರೂ ಆಗಿದ್ದ ಕರ್ಣಂಗೇರಿಯ ಚಂದ್ರಗಿರಿ ನಿವಾಸಿ ಕೆ.ಕೆ. ಶಿವ ಮೃತಪಟ್ಟಿದ್ದರೆ, ಇವರೊಂದಿಗಿದ್ದ ಶರಣು ಕೆ.ಪಿ. ಎಂಬವರಿಗೂ ಗುಂಡೇಟು ತಗುಲಿದ್ದು, ಗಾಯಗೊಂಡಿದ್ದಾರೆ.

(ಮೊದಲ ಪುಟದಿಂದ)

ಘಟನೆ ವಿವರ

ತಾ. 14ರ ರಾತ್ರಿ ಮಡಿಕೇರಿಯ ರಾಜೇಶ್ವರಿ ನಗರದ ದೇವಯ್ಯ, ಹೊನ್ನಯ್ಯ ಆಲಿಯಾಸ್ ಬಿನು, ಚಂದ್ರಗಿರಿಯ ಶಿವ ಹಾಗೂ ಶರಣು ಎಂಬವರು ಸೇರಿಕೊಂಡು ಅಲ್ಲಿನ ಅವರ ಮನೆ ಸನಿಹದ ಕಾಡಿಗೆ ಕೋವಿ ಸಹಿತವಾಗಿ ಬೇಟೆಗೆ ತೆರಳಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಕಾಡಿನೊಳಗೆ ಕಾಡುಪ್ರಾಣಿ ಎಂದು ಭಾವಿಸಿ ದೇವಯ್ಯ ಹಾರಿಸಿದ ಗುಂಡು ಶಿವ ಹಾಗೂ ಶರಣುವಿಗೆ ಬಿದ್ದಿದೆ. ಶಿವ ಅವರ ಎದೆ ಹಾಗೂ ತೊಡೆ ಭಾಗಕ್ಕೆ ಗುಂಡು ತಗುಲಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದೇ ಗುಂಡು ಶಿವನ ಸನಿಹದಲ್ಲಿದ್ದ ಶರಣುವಿನ ಕಾಲಿಗೂ ತಗುಲಿದ್ದು, ಗಾಯಗೊಂಡಿದ್ದಾರೆ.

ಬಳಿಕ ಈ ಬಗ್ಗೆ ಇತರರಿಗೆ ಮೊಬೈಲ್ ಕರೆ ಮಾಡಿ ಮಾಹಿತಿ ತಿಳಿಸಿದ್ದು, ಕೆಲವರ ಸಹಕಾರದೊಂದಿಗೆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮೃತನ ಸಹೋದರ ಸುರೇಂದ್ರ ಪೊಲೀಸರಿಗೆ ದೂರು ನೀಡಿದ್ದು, ಇದರಂತೆ ಗುಂಡು ಹಾರಿಸಿದ ದೇವಯ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕೋವಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದು ಮಡಿಕೇರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿ ಸಲಾಯಿತು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ. ವೃತ್ತ ನಿರೀಕ್ಷಕ ದಿವಾಕರ್, ಎಸ್‍ಐ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿದ್ದರು.