ಮಡಿಕೇರಿ, ಆ. 16: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ಆರಂಭದಿಂದ ಉಂಟಾದ ಅತಿವೃಷ್ಟಿಯಿಂದಾಗಿ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾಗಿರುವ ಕಾಫಿ ಫಸಲು ಬಹುತೇಕ ಕಡೆಗಳಲ್ಲಿ ನೆಲಕಚ್ಚುತ್ತಿದೆ. ಧಾರಾಕಾರ ಮಳೆ ಹಾಗೂ ಗಾಳಿ, ತೋಟದಲ್ಲೇ ಜಲ ಎದ್ದಿರುವದು, ಮಡಿಕೇರಿ, ಆ. 16: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ಆರಂಭದಿಂದ ಉಂಟಾದ ಅತಿವೃಷ್ಟಿಯಿಂದಾಗಿ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾಗಿರುವ ಕಾಫಿ ಫಸಲು ಬಹುತೇಕ ಕಡೆಗಳಲ್ಲಿ ನೆಲಕಚ್ಚುತ್ತಿದೆ. ಧಾರಾಕಾರ ಮಳೆ ಹಾಗೂ ಗಾಳಿ, ತೋಟದಲ್ಲೇ ಜಲ ಎದ್ದಿರುವದು, ಮಳೆಯಾಗಿದ್ದು, ಕಾಯಿ ಕಟ್ಟುತ್ತಿರುವ ಕಾಫಿ ಫಸಲು ಈಗಾಗಲೇ ನೆಲಕಚ್ಚುತ್ತಿವೆ. ಕಳೆದ ಎರಡು ವರ್ಷಗಳಲ್ಲೂ(ಮೊದಲ ಪುಟದಿಂದ) ಜಿಲ್ಲೆಯಲ್ಲಿ ನಿರಂತರವಾಗಿ ಅತಿವೃಷ್ಟಿ ಉಂಟಾಗಿದ್ದು, ಈ ಪರಿಸ್ಥಿತಿಯಿಂದ ಬೆಳೆಗಾರರು ಚೇತರಿಸಿಕೊಳ್ಳುವ ಮುನ್ನವೇ ಈ ವರ್ಷ ಮತ್ತೆ ಅದೇ ಪರಿಸ್ಥಿತಿ ಎದುರಾಗಿದೆ. ಪ್ರಸಕ್ತ ಸಾಲಿನಲ್ಲಿ ಕೆಲವಾರು ಕಡೆಗಳಲ್ಲಿ ಬೇಸಿಗೆ ಅವಧಿಯಲ್ಲಿಯೇ ತುಸು ಮಳೆ ಅಧಿಕ ಬಿದ್ದಿದ್ದರಿಂದಾಗಿ ಕಾಫಿ ಫಸಲು ಬೇಗನೆ ಕಾಯಿಕಟ್ಟುತ್ತಿದೆ. ಈಗಿನ ಧಾರಾಕಾರ ಮಳೆಯಿಂದಾಗಿ ಹಾಗೂ ತೇವಾಂಶ ಹೆಚ್ಚಾದ ಪರಿಣಾಮ ಕೈಗೆ ಬರುತ್ತಿದ್ದ ಕಾಫಿ ನೆಲಕಚ್ಚುತ್ತಿರುವದು ಬೆಳೆಗಾರರಲ್ಲಿ ಆತಂಕವನ್ನಂಟು ಮಾಡುತ್ತಿದೆ. ಹಲವಾರು ತೋಟಗಳಲ್ಲಿ ಮರಗಳು ಉರುಳಿ ಬಿದ್ದಿರುವದರಿಂದಾಗಿಯೂ ನಷ್ಟ ಸಂಭವಿಸಿದೆ. ಮಾತ್ರವಲ್ಲ ತೋಟಗಳಲ್ಲೇ ಜಲ ಎದ್ದಿರುವದು, ಇನ್ನಿತರ ರೀತಿಯ ವಾತಾವರಣದ ಏರು-ಪೇರಿನಿಂದಾಗಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಕಾಫಿ ಗಿಡದ ಎಲೆಗಳ ಉದುರುವಿಕೆಯೂ ಅಧಿಕವಾಗುತ್ತಿದೆ. ಇದಲ್ಲದೆ, ಗಿಡದಲ್ಲಿ ಕಾಫಿ ಕೊಳೆಯುತ್ತಿರುವದೂ ಅಲ್ಲಲ್ಲಿ ಕಂಡು ಬಂದಿದೆ. ಹಲವಾರು ಕಡೆಗಳಲ್ಲಿ ಕೆಲವಾರು ದಿನಗಳು ತೋಟಗಳು ಜಲಾವೃತಗೊಂಡಿದ್ದಂತಹ ಸನ್ನಿವೇಶವೂ ಎದುರಾಗಿದ್ದು, ಈ ಬಾರಿ ಜಿಲ್ಲೆಯಲ್ಲಿ ಕಾಫಿ ಉತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆಗಳು ಕಂಡು ಬರುತ್ತಿವೆ.

ಆನೆಗಳ ಉಪಟಳ: ಪ್ರಾಕೃತಿಕ ವಿಕೋಪದ ಪರಿಸ್ಥಿತಿ ಒಂದೆಡೆಯಾದರೆ ಜಿಲ್ಲೆಯಾದ್ಯಂತ ಕಾಡಾನೆಗಳು - ಕಾಡೆಮ್ಮೆಗಳು ಸೇರಿದಂತೆ ವನ್ಯಪ್ರಾಣಿಗಳ ಉಪಟಳವೂ ಹೆಚ್ಚಾಗುತ್ತಿದ್ದು, ಇದರಿಂದಾಗಿಯೂ ರೈತರ ಫಸಲು ಧರಾಶಾಹಿಯಾಗುತ್ತಿವೆ. ಕಾಡಾನೆಗಳು ಅಧಿಕ ಸಂಖ್ಯೆಯಲ್ಲಿ ನಾಡಿನೊಳಗೇ ಬೀಡುಬಿಟ್ಟಿದ್ದು, ಕಾಫಿ ತೋಟಗಳೇ ಅವುಗಳ ಆವಾಸ ಸ್ಥಾನವಾಗಿವೆ. ಇವುಗಳೊಂದಿಗೆ ಹಿಂಡು ಹಿಂಡಾಗಿ ಕಾಡುಕೋಣ, ಕಾಡೆಮ್ಮೆಗಳೂ ಕಾಫಿ ತೋಟಗಳನ್ನು ಧ್ವಂಸಗೊಳಿಸುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ತೋಟಗಳ ಸಮರ್ಪಕ ನಿರ್ವಹಣೆಯೂ ಬೆಳೆಗಾರರಿಗೆ ಸಾಧ್ಯವಾಗುತ್ತಿಲ್ಲ.

ವಿಶೇಷ ಪ್ಯಾಕೇಜ್‍ಗೆ ಮನವಿ : ಕಾಫಿ ಫಸಲು ಹಾನಿಯ ಕುರಿತಾಗಿ ಕೊಡಗು ಬೆಳೆಗಾರರ ಒಕ್ಕೂಟದಿಂದ ಈಗಾಗಲೇ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸಲಾಗಿದೆ. ಪ್ರಸಕ್ತ ವರ್ಷದ ಬಿರುಗಾಳಿ ಸಹಿತದ ಅತಿವೃಷ್ಟಿಗೆ ಬೆಳೆ ನಾಶವಾಗಿರುವ ಬಗ್ಗೆ ಸೂಕ್ತ ಪರಿಹಾರದೊಂದಿಗೆ ವಿಶೇಷ ಪ್ಯಾಕೇಜ್‍ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.