ಕೊರೊನಾ ಪಾಸಿಟಿವ್ ಬಂದರೆ ಎದುರಿಸುವ ಧೈರ್ಯ ಬೇಕು.., ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಇದು ಕೊರೊನಾ ಗೆದ್ದು ಬಂದ ಶಿರಂಗಾಲದ ಬಾಲಕಿ ಮಿಶ್ರಿಯಾಳ ಮಾತು.

ಶಿರಂಗಾಲದ ವ್ಯಾಪಾರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಅವರ ಕುಟುಂಬ ಸದಸ್ಯರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಯಿತು. ಐವರಲ್ಲಿ ತಾಯಿ ಹಾಗೂ ಮಗನಿಗೆ ನೆಗೆಟಿವ್ ಬಂದಿದೆ. ತಂದೆ, ಇನ್ನಿಬ್ಬರು ಮಕ್ಕಳಿಗೆ ಪಾಸಿಟಿವ್ ಬಂದಿದ್ದು ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಎಲ್ಲರೂ ಗುಣಮುಖರಾಗಿ ಮನೆಗೆ ಬಂದಿದ್ದಾರೆ. ಈ ಪೈಕಿ ಬಾಲಕಿ ಮಿಶ್ರಿಯಾ ತನ್ನ ಅನುಭವ ಹಂಚಿಕೊಂಡಿದ್ದಾಳೆ.

ಪಾಸಿಟಿವ್ ಬಂದ ಮೇಲೆ ಆಸ್ಪತ್ರೆಯಲ್ಲಿ ಇದ್ದೆವು. ಹತ್ತು ದಿನದ ಮೇಲೆ ನೆಗೆಟಿವ್ ಬಂದ ಮೇಲೆ ನಮ್ಮನ್ನೆಲ್ಲ ಗಾಳಿಬೀಡು ಸನಿಹದ ನವೋದಯ ಶಾಲೆಯ ಕೇಂದ್ರದಲ್ಲಿ ಇರಿಸಲಾಗಿತ್ತು. ನಮಗೆ ಜ್ವರದ ಯಾವದೇ ಲಕ್ಷಣ ಇರಲಿಲ್ಲ, ಕೇಂದ್ರದಲ್ಲಿ ವಿಟಮಿನ್ ಸಿ ಮಾತ್ರೆ, ಕೊಡುತ್ತಿದ್ದರು. ಮನೆಯಿಂದ ಹಾಗೂ ಮಸೀದಿ ಕಡೆಯಿಂದ ಕಷಾಯ ಹಾಗೂ ಊಟ ಕೊಡುತ್ತಿದ್ದರು. ಕೇಂದ್ರದಲ್ಲೂ ಒಳ್ಳೆಯ ಊಟೋಪಚಾರ, ವ್ಯವಸ್ಥೆಗಳಿದ್ದವು. ಎಲ್ಲವೂ ಸರಿಯಾಗುತ್ತೆ ಹೆದರಬಾರದಷ್ಟೆಂದು ಹೇಳುತ್ತಾಳೆ.

ನಮ್ಮ ಆರೋಗ್ಯದ ಬಗ್ಗೆ ನಾವು ಜಾಗೃತರಾಗಿರಬೇಕು, ವೈದ್ಯರು ನೀಡುವ ಸಲಹೆ ಪಾಲಿಸಬೇಕು. ಧೈರ್ಯದಿಂದ ಎದುರಿಸಬೇಕು. ನಿರ್ಲಕ್ಷ್ಯ ಮಾತ್ರ ಮಾಡಬಾರದು. ರೋಗ ವಾಸಿಯಾಗುತ್ತೆ ಎಂದು ಮನದಾಳದ ಮಾತನ್ನಾಡುತ್ತಾಳೆ.