ರೌಡಿಗಳ ಮನೆ ಮೇಲೆ ದಾಳಿ

ಬೆಂಗಳೂರು, ಆ. 16: ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆಯ ನಂತರ ಎಚ್ಚೆತ್ತುಕೊಂಡಿರುವ ಮಾಗಡಿ ಪೊಲೀಸರು ರೌಡಿಗಳ ಮನೆ ಮೇಲೆ ದಿಢೀರ್ ಪೊಲೀಸ್ ದಾಳಿ ನಡೆಸಿದ್ದಾರೆ. ಮಾಗಡಿ ಹಾಗೂ ಕುದೂರು ಮತ್ತು ತಾವರೆಕೆರೆ ರೌಡಿಗಳನ್ನು ಮಾಗಡಿ ಪೊಲೀಸ್ ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರೌಡಿಗಳ ಮನೆ ಮೇಲೆ ದಾಳಿ ನಡೆಸಿ, ಮನೆಯಲ್ಲಿದ್ದ ಆಯುಧಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮಾಗಡಿ ಸರ್ಕಲ್ ಇನ್ಸ್‍ಪೆಕ್ಟರ್ ಬಿ.ಎಸ್. ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮಾಗಡಿ ಠಾಣೆಯಲ್ಲಿ ರೌಡಿಶೀಟರ್‍ಗಳ ಪರೇಡ್ ನಡೆಸಿದರು. ಬೆಂಗಳೂರಿಗೆ ಅಂಟಿಕೊಂಡಿರುವ ತಾವರೆ ಕೆರೆ ಹಾಗೂ ಕುದೂರಿನಲ್ಲಿ ಯಾವುದೇ ರೀತಿಯ ಗಲಭೆ ನಡೆಯದಂತೆ ರೌಡಿಗಳಿಗೆ ಪೊಲೀಸರು ತಾಕೀತು ಮಾಡಿದರು.

ಅವಹೇಳನಕಾರಿ ಪೋಸ್ಟ್ ಹಾಕಿದ್ರೆ ಕ್ರಮ

ಬೆಂಗಳೂರು, ಆ. 16: ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಇನ್ನು ಮುಂದೆ ಫೇಸ್‍ಬುಕ್, ಇನ್‍ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುವವರ ವಿರುದ್ಧ ಕ್ರಮ ಜರುಗಿಸಲು ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೋಮುಗಲಭೆ, ವೈಷಮ್ಯ ಮೂಡಿಸುವಂತ ಪೋಸ್ಟ್ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ಸಾಮಾಜ ಸ್ವಾಸ್ಥ್ಯ ಕಾಪಾಡಲು ನಾವು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಆದ್ದರಿಂದ ನಾನು ಈ ಕುರಿತು ತಾಂತ್ರಿಕ ತಜ್ಞರ ಜೊತೆಯೂ ಚರ್ಚೆಯೂ ಮಾಡಿ ತೀರ್ಮಾನ ಕೈಗೊಳ್ಳಲಾಗುವುದಾಗಿ ತಿಳಿಸಿದರು.

ಬೆಳೆ ವಿಮೆ ರೈತರ ಖಾತೆಗೆ

ಬೆಂಗಳೂರು, ಆ. 16: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 1 ಸಾವಿರ ಕೋಟಿ ರೂಪಾಯಿಗಳನ್ನು 50 ಲಕ್ಷ ರೈತರಿಗೆ ಬಿಡುಗಡೆಯಾಗಿದ್ದು, ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಫೇಸ್‍ಬುಕ್ ಲೈವ್‍ನಲ್ಲಿ ರಾಜ್ಯದ ರೈತ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಸಚಿವರು, ರೈತ ಬಾಂಧವರು ತಮ್ಮ ಖಾತೆಯನ್ನು ಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ. 2019-20ನೇ ಸಾಲಿನ ಬೆಳೆ ವಿಮೆ ಮಂಗಳವಾರದಿಂದ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದ್ದು, ವಿಮೆಗಾಗಿ ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗುವುದಾಗಲೀ ಚಿಂತಿಸುವ ಅವಶ್ಯಕತೆಯಿಲ್ಲ. ಸರ್ಕಾರ ಮತ್ತು ಇಲಾಖೆ ಎಂದಿಗೂ ರೈತರೊಂದಿಗೆ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಸಚಿವರು ಹೇಳಿದರು.

ವೈಷ್ಣೋದೇವಿ ದರ್ಶನ ಆರಂಭ

ಕಾಟ್ರಾ, ಆ. 16: ಕೊರೊನಾ ವೈರಸ್ ಸಾಂಕ್ರಾಮಿಕದ ಲಾಕ್‍ಡೌನ್ ನಿಂದಾಗಿ ಮುಚ್ಚಲ್ಪಟ್ಟಿದ್ದ ಮಾತಾ ವೈಷ್ಣೋದೇವಿ ದೇಗುಲವನ್ನು ಐದು ತಿಂಗಳ ಬಳಿಕ ಮೊದಲ ಬಾರಿಗೆ ಭಕ್ತರಿಗಾಗಿ ತೆರೆಯಲಾಗಿದೆ. ಜಮ್ಮುವಿನ ಕಾಟ್ರಾದಲ್ಲಿರುವ ತ್ರಿಕುಟಾ ಬೆಟ್ಟದಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳ ವೈಷ್ಣೋದೇವಿ ದೇಗುಲ ಭೇಟಿಗೆ ಸರ್ಕಾರ ಅನುಮತಿ ನೀಡಿದ್ದು, ಭಕ್ತರ ದರ್ಶನಕ್ಕಾಗಿ ವೈಷ್ಣೋದೇವಿ ದೇಗುಲವನ್ನು ಇಂದಿನಿಂದ ತೆರೆಯಲಾಗಿದೆ. ಜಮ್ಮುವಿನ ಖುಷ್ವಿಂದರ್ ಸಿಂಗ್ ಅವರ ನೇತೃತ್ವದ 12 ಸದಸ್ಯರ ತಂಡ ಭಾನುವಾರ ಮುಂಜಾನೆ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆ. ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಮೊದಲ ತಂಡದಲ್ಲಿ ಖುಷ್ವಿಂದರ್ ಸಿಂಗ್ ಮತ್ತು ಸದಸ್ಯರು ಇದ್ದರು. ಜಮ್ಮುವಿನಿಂದ ಹೊರಟ ಖುಷ್ವಿಂದರ್ ತಂಡ, ಮುಂಜಾನೆ ನಾಲ್ಕು ಗಂಟೆಗೆ ಕಾಟ್ರಾದಲ್ಲಿರುವ ದೇಗುಲಕ್ಕೆ ಭೇಟಿ ನೀಡುವ ಯಾತ್ರಿಕರ ಶಿಬಿರವನ್ನು ತಲುಪಿತು. ಬೆಳಿಗ್ಗೆ 6 ಗಂಟೆಗೆ ದೇವಾಲಯದ ದ್ವಾರಗಳು ತೆರೆದವು. ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್‍ಕುಮಾರ್ ಅವರು ಯಾತ್ರಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ, ಎಲ್ಲ ರೀತಿಯ ಕ್ರಮಗಳನ್ನು ಕೊನೆಯವರೆಗೂ ಪರಿಶೀಲಿಸಿ, ನಂತರ ಯಾತ್ರಾರ್ಥಿಗಳನ್ನು ದರ್ಶನಕ್ಕೆ ಬಿಡುವ ವ್ಯವಸ್ಥೆ ಮಾಡಿದ್ದಾರೆ.

ತೋಳ ದಾಳಿಗೆ ಕುರಿಗಳ ಸಾವು

ಗದಗ, ಆ. 16: ತೋಳ ದಾಳಿ ನಡೆಸಿದ ಪರಿಣಾಮ 15ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಚೇನಹಳ್ಳಿಯಲ್ಲಿ ನಡೆದಿದೆ. ಬಸವರಾಜ್ ಪೂಜಾರ ಅವರಿಗೆ ಸೇರಿದ 15ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಜಮೀನಿನಲ್ಲಿರುವ ಕುರಿ ದಡ್ಡಿ ಮೇಲೆ ತೋಳಗಳ ಹಿಂಡು ದಾಳಿ ಮಾಡಿವೆ. ಯಾರೂ ಇಲ್ಲದ ವೇಳೆ ಏಕಾಏಕಿ ತೋಳಗಳು ದಾಳಿ ನಡೆಸಿದ್ದು, 15 ಕುರಿ ಹಾಗೂ ಮರಿಗಳು ಸಾವನ್ನಪ್ಪಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಆರ್ಥಿಕ ನಷ್ಟ ಅನುಭವಿಸಿದ ಕುರಿ ಮಾಲೀಕ ಬಸವರಾಜ್ ಅವರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕುರಿಗಳನ್ನು ಕಳೆದುಕೊಂಡ ಮಾಲೀಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಚೇತನ್ ಚೌಹಾನ್ ಕೋವಿಡ್‍ಗೆ ಬಲಿ

ನವದೆಹಲಿ, ಆ. 16: ಉತ್ತರ ಪ್ರದೇಶ ಸಚಿವ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಚೇತನ್ ಚೌಹಾನ್ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕಳೆದ ತಿಂಗಳು ಚೇತನ್ ಚೌಹಾಣ್‍ಗೆ ಕೊರೊನಾ ಸೋಂಕು ತಗುಲಿತ್ತು. ಈಗ ಬಹು ಅಂಗಾಂಗ ವೈಫಲ್ಯದಿಂದ ಮೇದಾಂತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಭಾರತ ಕ್ರಿಕೆಟ್ ತಂಡದ ಪರವಾಗಿ 40 ಟೆಸ್ಟ್‍ಗಳಲ್ಲಿ ಚೇತನ್ ಚೌಹಾನ್ ಆಡಿದ್ದರು. 73 ವರ್ಷದ ಚೌಹಾಣ್ ಪತ್ನಿ ಹಾಗೂ ಓರ್ವ ಪುತ್ರ ವಿನಾಯಕ್‍ನ್ನು ಅಗಲಿದ್ದಾರೆ.

ಹಿರಿಯ ಪತ್ರಕರ್ತ ಸೋಮಶೇಖರ್ ನಿಧನ

ಬೆಂಗಳೂರು, ಆ. 16: ಹಿರಿಯ ಪತ್ರಕರ್ತ ಸೋಮಶೇಖರ್ ಯಡವಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತೀವ್ರ ಸಂತಾಪ ಸೂಚಿಸಿದ್ದಾರೆ. ಸಂಯುಕ್ತ ಕರ್ನಾಟಕದ ಹಿರಿಯ ಪತ್ರಕರ್ತ ಸೋಮಶೇಖರ್ ಯಡವಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಸರಳ, ಸಜ್ಜನ ವ್ಯಕ್ತಿಯಾಗಿದ್ದ ಅವರು ತಮ್ಮ ನಿಷ್ಪಕ್ಷಪಾತ ಹಾಗೂ ವಸ್ತುನಿಷ್ಠ ವರದಿಗಾರಿಕೆಯಿಂದ ಹೆಸರುವಾಸಿಯಾಗಿದ್ದರು. ಇತ್ತೀಚೆಗೆ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ ನನ್ನ ಸಂದರ್ಶನ ಮಾಡಿದ್ದು, ನನ್ನ ನೆನಪಿನಂಗಳದಲ್ಲಿ ಇನ್ನೂ ಹಚ್ಚ ಹಸಿರಾಗಿದೆ. ಯಡವಟ್ಟಿ ಅವರ ನಿಧನದಿಂದ ಮಾಧ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಭಗವಂತ ಮೃತರ ಆತ್ಮಕ್ಕೆ ಶಾಂತಿಯನ್ನು ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ್ದಾರೆ.

ಭೂ ಕುಸಿತದಿಂದ 18 ಸಾವು

ಕಠ್ಮಂಡು, ಆ. 16: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇಪಾಳದಲ್ಲಿ ಭಾರಿ ಭೂ ಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಟ 18 ಮಂದಿ ಸಾವನ್ನಪ್ಪಿ 21 ಮಂದಿ ನಾಪತ್ತೆಯಾಗಿದ್ದಾರೆ. ಮಧ್ಯ ನೇಪಾಳದ ಸಿಂಧೂಪಾಲ್ ಚೌಕ್ ಜಿಲ್ಲೆಯ ಜುಗಾಲ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಟ 18 ಮಂದಿ ಸಾವನ್ನಪ್ಪಿ, 21 ಮಂದಿ ನಾಪತ್ತೆಯಾಗಿದ್ದಾರೆ. ಈವರೆಗೂ 18 ಮೃತ ದೇಹಗಳನ್ನು ಅವಶೇಷಗಳಡಿಯಿಂದ ಹೊರಕ್ಕೆ ತೆಗೆಯಲಾಗಿದೆ. ಇನ್ನೂ 21 ಮಂದಿ ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವವರಿಗಾಗಿ ಕಾರ್ಯಾಚರಣೆ ಮುಂದುವರೆಸಲಾಗಿದೆ. ಮೂಲಗಳ ಪ್ರಕಾರ ಲಿಡಿ ಗ್ರಾಮದ ಗುಡ್ಡ ಕುಸಿದಿದ್ದು, 170 ಮನೆಗಳ ಪೈಕಿ 37 ಮನೆಗಳು ಭೂಕುಸಿತದಲ್ಲಿ ನಾಶವಾಗಿವೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಗುಡ್ಡದ ಅಡಿಯಲ್ಲಿದ್ದ 25 ಮನೆಗಳು ನಾಮಾವಶೇಷವಾಗಿದೆ ಎಂದು ಸ್ಥಳೀಯ ಎಸ್‍ಪಿ ಪ್ರಜ್ವೋಲ್ ಮಹಾರ್ಜನ್ ಹೇಳಿದ್ದಾರೆ.