ಕೊಡ್ಲಿಪೇಟೆ,ಆ.15: ಕೊಡ್ಲಿಪೇಟೆ ಸಮೀಪದ ಕಿರಿಕೊಡ್ಲಿ ಗ್ರಾಮದಿಂದ ಎರಡು ಉಳುಮೆ ಎತ್ತುಗಳನ್ನು ಕಳ್ಳತನ ಮಾಡಿ ಅರಕಲಗೂಡು ತಾಲೂಕಿನಲ್ಲಿ ಮಾರಾಟ ಮಾಡಲು ಯತ್ನಿಸಿದ ಮೂವರು ಆರೋಪಿ ಗಳನ್ನು ಕೊಡ್ಲಿಪೇಟೆ ಪೊಲೀಸ್ ಉಪಠಾಣೆಯ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಘಟನೆ ನಡೆದ ಕೆಲ ಘಂಟೆಗಳಲ್ಲೇ ಸಿನಿಮೀಯ ಕಾರ್ಯಾಚರಣೆ ನಡೆಸಲಾಗಿದೆ.

ಕೊಡ್ಲಿಪೇಟೆಯ ಕಿರಿಕೊಡ್ಲಿ ನಿವಾಸಿ, ಕೃಷಿಕ ಬಾಲಚಂದ್ರ ಎಂಬವರಿಗೆ ಸೇರಿದ ಸುಮಾರು 70 ಸಾವಿರ ಮೌಲ್ಯದ 2 ಉಳುಮೆ ಎತ್ತುಗಳನ್ನು ಕಳ್ಳತನ ಮಾಡಿ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇರೆ ಕಿರಿಕೊಡ್ಲಿ ಗ್ರಾಮದ ಪುಟ್ಟ, ಹೆಬ್ಬುಲುಸೆ ಗ್ರಾಮದ ನಾಗರಾಜು(ಅಪ್ಪಣ್ಣಿ) ಹಾಗೂ ದೊಡ್ಡಕುಂದ ಗ್ರಾಮದ ಪೊನ್ನಪ್ಪ ಅವರುಗಳನ್ನು ಕೊಡ್ಲಿಪೇಟೆ ಪೊಲೀಸರು ಬಂಧಿಸಿದ್ದಾರೆ.

ಇಂದು ಬೆಳಿಗ್ಗೆ ನಸುಕಿನ 4 ಗಂಟೆ ಜಾವದಲ್ಲಿ ಬಾಲಚಂದ್ರ ಅವರು ತಮ್ಮ ಕೊಟ್ಟಿಗೆಯಲ್ಲಿದ್ದ ಎತ್ತುಗಳನ್ನು ಹೊರ (ಮೊದಲ ಪುಟದಿಂದ) ತಂದು ಉಳುಮೆ ಕಾರ್ಯಕ್ಕೆಂದು ಹೊರಭಾಗದಲ್ಲಿ ಕಟ್ಟಿಹಾಕಿ, ಸ್ನಾನಕ್ಕೆಂದು ಮನೆಯೊಳಗೆ ತೆರಳಿದ ಸಂದರ್ಭ ಸಾಧಿಸಿದ ಗೋವು ಕಳ್ಳರು, ಎರಡು ಎತ್ತುಗಳನ್ನು ಕಳವು ಮಾಡಿ ಸುಮಾರು 3 ಕಿ.ಮೀ. ಹೊಡೆದುಕೊಂಡು ತಂದಿದ್ದಾರೆ.

ನಂತರ ಆಪೆ ವಾಹನದಲ್ಲಿ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಸಮೀಪದ ಗೋರಿ ಎಂಬಲ್ಲಿಗೆ ಸಾಗಿಸಿದ್ದಾರೆ. ಈ ಸಂದರ್ಭ ಆಪೆ ವಾಹನದ ಚಾಲಕನಿಗೆ ಸಂಶಯ ಬಂದು, ಗೋರಿ ಗ್ರಾಮದಲ್ಲೇ ಗೋವುಗಳನ್ನು ಇಳಿಸಿ ಕೊಡ್ಲಿಪೇಟೆಗೆ ವಾಪಸ್ ಆಗಿದ್ದಾನೆ.

ಇಷ್ಟರಲ್ಲಿ ಗೋವುಗಳು ಕಳುವಾದ ಬಗ್ಗೆ ಬಾಲಚಂದ್ರ ಅವರು ಕೊಡ್ಲಿಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಮುಖ್ಯಪೇದೆ ಡಿಂಪಲ್ ಮತ್ತು ಸಿಬ್ಬಂದಿಗಳು, ವಾಹನ ಚಾಲಕನನ್ನು ಪತ್ತೆಹಚ್ಚಿದ್ದು, ಆತ ನೀಡಿದ ಮಾಹಿತಿಯನ್ವಯ ಪುಟ್ಟ, ನಾಗರಾಜು, ಪೊನ್ನಪ್ಪ ಅವರುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ನಂತರ ಮಲ್ಲಿಪಟ್ಟಣ ಸಮೀಪದ ಗೋರಿ ಎಂಬಲ್ಲಿ ಸಂಬಂಧಿಕರ ಮನೆಯೊಂದರಲ್ಲಿ ಕಟ್ಟಿಹಾಕಿದ್ದ ಗೋವುಗಳನ್ನು ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಯಿತು. ಕಾರ್ಯಾಚರಣೆಯಲ್ಲಿ ಪೊಲೀಸ್ ಪೇದೆ ಪಾಟೀಲ್ ಭಾಗವಹಿಸಿದ್ದರು.