ವೀರಾಜಪೇಟೆ, ಆ. 14: ಹಿರಿಯ ನಾಗರಿಕರ ವೇದಿಕೆಯಿಂದ, ಕೋವಿಡ್ 19 ಹಾಗೂ ಪ್ರಕೃತಿ ವಿಕೋಪ ಸಂಬಂಧ ವಿಚಾರ ಸಂಕಿರಣವನ್ನು ಶೀಘ್ರದಲ್ಲಿಯೆ ತಹಶೀಲ್ದಾರ್ ಕಚೇರಿಯಲ್ಲಿ ನಡೆಸಲಾಗುವುದು ಎಂದು ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಜಿಲ್ಲೆಯು ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಿದೆ. ಹಿರಿಯರ ಜೀವನ ನಿರ್ವಹಣೆಗೆ ಬ್ಯಾಂಕ್, ಸಂಘ ಸಂಸ್ಥೆಗಳು, ಸಹಕಾರ ಸಂಘಗಳಲ್ಲಿ ಸಾಲ ಮಾಡಿಕೊಳ್ಳಲಾಗಿದೆ. ಸಾಲವನ್ನು ಮರುಪಾವತಿ ಮಾಡಲು ಕಷ್ಟ ಸಾಧ್ಯವಾಗಿದೆ. ಸರ್ಕಾರ ಕೂಡಲೇ ರೈತರು ಹಾಗೂ ಹಿರಿಯ ನಾಗರಿಕರು ಮಾಡಿಕೊಂಡಿರುವ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಕರೋನಾ ಕಾಯಿಲೆಯಿಂದ ಮುಕ್ತವಾಗಲು 60 ವರ್ಷ ಮೇಲ್ಪಟ್ಟವರು 10 ವರ್ಷದ ಕೆಳಗಿನ ವಯೋಮಾನದವರು ಹೊರಗೆ ಬರಬಾರದು ಎಂದು ಪ್ರಧಾನ ಮಂತ್ರಿಗಳು ನೀಡಿರುವ ಸಂದೇಶಕ್ಕೆ ಹಿರಿಯ ನಾಗರಿಕರು ತಲೆಬಾಗಿ ಪಾಲಿಸುತ್ತಿದ್ದೇವೆ ಎಂದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಪುಲಿಯಂಡ ಪೊನ್ನಪ್ಪ, ನಿರ್ದೇಶಕ ರಾದ ಪುಟ್ಟಿಚಂಡ ಅಯ್ಯಣ್ಣ, ಕಾಮೇಯಂಡ ಈರಪ್ಪ, ಕಚೇರಿ ಸಿಬ್ಬಂದಿ ಟೈನಿ ಬೋಪಣ್ಣ ಉಪಸ್ಥಿತರಿದ್ದರು.