ಮಡಿಕೇರಿ, ಆ. 14: ಕೆಲವಾರು ಕಾರಣಗಳಿಂದಾಗಿ ಸರಕಾರದ ಮೂಲಕ ನಡೆಯುತ್ತಿರುವ ಬಾಲಕರ ಬಾಲಮಂದಿರ ಹಾಗೂ ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯ ಪಡೆದಿರುವ ಮಕ್ಕಳ ಲಾಲನೆ-ಪಾಲನೆಯ ಕುರಿತು ಸಂಬಂಧಿಸಿದ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಯಚಟುವಟಿಕೆ ನಡೆಸಲಾಗುತ್ತಿದೆ.

ಪ್ರಸಕ್ತ ಸಾಲಿನಲ್ಲಿ ಮಾರ್ಚ್ ತಿಂಗಳಿನಿಂದಲೇ ಕೊರೊನಾ ಸಮಸ್ಯೆಯ ಕಾರಣದ ನಿರ್ಬಂಧಗಳಿಂದಾಗಿ ಇಲ್ಲಿ ಆಶ್ರಯ ಪಡೆದಿರುವ ಮಕ್ಕಳು ಆಯಾ ಕೇಂದ್ರದ ಒಳಗೇ ಕಾಲ ಕಳೇಯಬೇಕಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ನಿಟ್ಟಿನಲ್ಲಿ ಹಲವು ಮುಂಜಾಗ್ರತೆಯನ್ನು ವಹಿಸಿದ್ದು, ಕೇಂದ್ರದಲ್ಲಿಯೇ ಉಳಿದಿರುವ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

ಮಾರ್ಚ್‍ನಿಂದ ಈ ಮಕ್ಕಳನ್ನು ಕೇಂದ್ರದಿಂದ ಹೊರ ಬಿಡಲಾಗುತ್ತಿಲ್ಲ. ಮಕ್ಕಳಿಗೆ ಮಾರ್ಗದರ್ಶನ ನೀಡುವ ಶಿಕ್ಷಕರು-ಸಿಬ್ಬಂದಿಗಳಿಗೆ ಮಾತ್ರ ಒಳ ಪ್ರವೇಶಕ್ಕೆ ಅವಕಾಶವಿದೆ. ಇವರು ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಬಳಸುವುದು ಕಡ್ಡಾಯವಾಗಿದೆ. ಕೇಂದ್ರದಲ್ಲಿರುವ ಮಕ್ಕಳಿಗೂ ಇದರ ವ್ಯವಸ್ಥೆಯನ್ನು ಇಲಾಖೆಯ ಸೂಚನೆಯಂತೆ ಒದಗಿಸಲಾಗುತ್ತಿದೆ ಎಂದು ಕೇಂದ್ರದ ಮೇಲ್ವಿಚಾರಕರುಗಳಾದ ಚರಣ್ ಹಾಗೂ ವನಿತಾ ಕೆ.ಬಿ. ಅವರುಗಳು ‘ಶಕ್ತಿ’ ಈ ಕುರಿತು ಮಾಹಿತಿ ಬಯಸಿದಾಗಿ ತಿಳಿಸಿದರು.

ಇಲಾಖೆಯ ಸೂಚನೆಯಂತೆ ಮಕ್ಕಳಿಗೆ ಚಿತ್ರ ಬಿಡಿಸುವುದು, ಏಕಪಾತ್ರಾಭಿನಯ, ಕವನ ರಚನೆಯಂತಹ ಚಟುವಟಿಕೆಗಳು, ಪತ್ರಿಕೆ ಓದುವುದು, ಹಿರಿಯ ವಿದ್ಯಾರ್ಥಿಗಳು, ಕಿರಿಯರಿಗೆ ಪತ್ರಿಕಾ ವರದಿಗಳ ಕುರಿತು ಮಾಹಿತಿ ಒದಗಿಸುವುದು ಇಂತಹ ಕ್ರಿಯಾಶೀಲ ಕಾರ್ಯಕ್ರಮಗಳು ಮಾರ್ಚ್‍ನಿಂದ ನಡೆಯುತ್ತಿವೆ. ಇದೀಗ ಕೆಲವು ಸಮಯದಿಂದ ಆನ್‍ಲೈನ್ ತರಗತಿಗಳನ್ನು ನಡೆಸಲಾ ಗುತ್ತಿದೆ. ಚಂದನ ವಾಹಿನಿಯ ಮೂಲಕ ನಡೆಯುವ ಕಾರ್ಯಕ್ರಮ ದಲ್ಲಿ ಮಕ್ಕಳು ತೊಡಗಿಸಿ ಕೊಳ್ಳುತ್ತಿದ್ದಾರೆ. ಇದರೊಂದಿಗೆ ಈ ಮಕ್ಕಳ ಕರ್ತವ್ಯಕ್ಕೆ ನಿಯೋಜಿತ ರಾಗಿರುವ ತರಬೇತುದಾರರು, ಶಿಕ್ಷಕರು ಪ್ರಸ್ತುತ ಕೇಂದ್ರಕ್ಕೆ ವಾರದ ಕೆಲದಿನಗಳಲ್ಲಿ ಭೇಟಿ ನೀಡಿ ಮಾರ್ಗದರ್ಶನ ನೀಡುತ್ತಿರುವುದಾಗಿ ಅವರುಗಳು ಮಾಹಿತಿಯಿತ್ತರು.

ಪ್ರಸ್ತುತ ಬಾಲಕರ ಬಾಲಮಂದಿ ರದಲ್ಲಿ 14 ಮಕ್ಕಳು ಹಾಗೂ ಬಾಲಕಿಯರ ಬಾಲಮಂದಿರದಲ್ಲಿ 22 ಮಕ್ಕಳು ಆಶ್ರಯ ಪಡೆದಿದ್ದಾರೆ. ಕೆಲವು ಮಕ್ಕಳು ರಜೆಯಲ್ಲಿ ಪೋಷಕರೊಂದಿಗೆ ತೆರಳಿದ್ದಾರೆ.