ಸೋಮವಾರಪೇಟೆ, ಆ.14: ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ನಡೆದ ದಾಂಧಲೆ ಪ್ರಕರಣವನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಯಿತು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಲಾಯಿತು.

ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಯ ಕಾರ್ಯಕರ್ತರು, ಶಾಸಕ ಶ್ರೀನಿವಾಸ್‍ಮೂರ್ತಿ ಅವರ ಮನೆ ಸೇರಿದಂತೆ ಸ್ಥಳೀಯ ಹಿಂದೂಗಳ ಮೇಲೆ ದಾಂಧಲೆ ನಡೆಸಿ, ಆಸ್ತಿಪಾಸ್ತಿ ನಷ್ಟಗೊಳಿಸಿದ್ದಾರೆ. ಇದರೊಂದಿಗೆ ಕರ್ತವ್ಯ ನಿರತ ಪೊಲೀಸರ ಮೇಲೂ ಧಾಳಿ ನಡೆಸಿರುವದು ಅಕ್ಷಮ್ಯವಾಗಿದ್ದು, ಇಂತಹ ಪುಂಡರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸುಭಾಷ್ ತಿಮ್ಮಯ್ಯ,ನ್ಯಾಯ ಜಾಗರಣದ ಜಿಲ್ಲಾ ಸಂಯೋಜಕ ಮನೋಹರ್ ತಾಲೂಕು ಅಧ್ಯಕ್ಷ ಎಂ.ಬಿ. ಉಮೇಶ್, ಕಾರ್ಯದರ್ಶಿ ಸುನಿಲ್ ಮಾದಾಪುರ, ಮಾತೃ ಸುರಕ್ಷಾ ತಾಲೂಕು ಸಂಯೋಜಕ ಹೊಸಳ್ಳಿ ರಂಜನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ, ಜಿ.ಪಂ. ಸದಸ್ಯ ಬಿ.ಜೆ. ದೀಪಕ್ ಸೇರಿದಂತೆ ಇತರರು ಭಾಗವಹಿಸಿದ್ದರು.