ಮಡಿಕೇರಿ, ಆ. 14: ಪಂಜಾಬ್‍ನ ಚಂಡೀಗಡದಲ್ಲಿ ವಿಷಪೂರಿತ ಮದ್ಯ ಸೇವನೆಯಿಂದ ಹಾಗೂ ಆಂಧ್ರ ಪ್ರದೇಶದಲ್ಲಿ ಸ್ಯಾನಿಟೈಸರ್ ಸೇವಿಸಿ ಹಲವರು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಬಗ್ಗೆ ಮುನ್ನೆಚ್ಚರಿಕಾ ಕ್ರಮವಾಗಿ ಅಬಕಾರಿ ಇಲಾಖೆ ಕಾರ್ಯಾಚರಣೆ ಹಮ್ಮಿಕೊಂಡಿದೆ.
ಈ ಕುರಿತು ವಿವಿಧೆಡೆ ದಾಳಿ ನಡೆಸುವುದರೊಂದಿಗೆ ಸಾರ್ವಜನಿಕವಾಗಿ ಮಾಹಿತಿಯನ್ನು ನೀಡಲಾಗುತ್ತಿದೆ. ಇದರಂತೆ ಕಳೆದೆರಡು ದಿನಗಳಿಂದ ವೀರಾಜಪೇಟೆ ತಾಲೂಕಿನ ಹಲವೆಡೆ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಅಕ್ರಮಗಳು ಕಂಡುಬಂದಿಲ್ಲ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನ ತಿತಿಮತಿ ವ್ಯಾಪ್ತಿಯ ನೋಕ್ಯ, ಆಯಿರಸುಳಿ, ಜಂಗಲ್‍ಹಾಡಿ, ಚೀನಿಹಡ್ಲು ಹಾಗೂ ಮಾಲ್ದಾರೆ, ಗುಡ್ಲೂರು ಗ್ರಾಮಗಳಲ್ಲಿ ಅಬಕಾರಿ ಉಪ ಆಯುಕ್ತರು ಕೊಡಗು ಜಿಲ್ಲೆ, ಮಡಿಕೇರಿ ಅವರ ನೇತೃತ್ವದಲ್ಲಿ ವೀರಾಜಪೇಟೆ ವಲಯ ಅಬಕಾರಿ ನಿರೀಕ್ಷಕರು ಹಾಗೂ ಉಪ ನಿರೀಕ್ಷಕರು ಹಾಗೂ ಸಹ ಸಿಬ್ಬಂದಿಯವರೊಂದಿಗೆ ಕಳ್ಳಭಟ್ಟಿ, ಕಳ್ಳಭಟ್ಟಿ ಶೇಂದಿ ಹಾಗೂ ವಿಷಪೂರಿತ ಮದ್ಯ ಸೇವನೆಯಿಂದ ಉಂಟಾಗುವ ದುರಂತದ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಿ ಈ ಬಗ್ಗೆ ಮೇಲ್ಕಂಡ ಗ್ರಾಮಗಳಲ್ಲಿ ಈ ರೀತಿ ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕೆಂದು ತಿಳಿಸಲಾಯಿತು.