ಗೋಣಿಕೊಪ್ಪ ವರದಿ, ಆ. 13: ಭೂ ಸುಧಾರಣೆ ಕಾಯ್ದೆ ವಿರೋಧಿಸಿ ತಾ. 15 ರಂದು ಕರಾಳ ದಿನ ಆಚರಿಸಲಾಗುವುದು ಎಂದು ಸಾಮೂಹಿಕ ನಾಯಕತ್ವದ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 11 ಗಂಟೆಗೆ ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದಿಂದ ಗಾಂಧಿ ಪ್ರತಿಮೆವರೆಗೆ ಮೌನ ಮೆರವಣಿಗೆ ಮೂಲಕ ಪ್ರತಿಭಟಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭೂ ಸುಧಾರಣೆ ಕಾಯ್ದೆ ರೈತ ವಿರೋಧಿ ನೀತಿಯಾಗಿದ್ದು, ರೈತನ ಭೂಮಿ ಉಳಿಯುವುದೇ ಎಂಬ ಆತಂಕ ಮನೆ ಮಾಡಿದೆ. ಭೂ ಮಾಫಿಯಾಕ್ಕೆ ಮಣಿದು ಸರ್ಕಾರ ಇಂತಹ ಕಾಯ್ದೆ ತಂದಿದೆ. ಕೊಡಗಿನ ರೈತರು ಅತಿವೃಷ್ಟಿಯಿಂದ ಕೃಷಿ ಭೂಮಿ ಕಳೆದುಕೊಂಡು ತೊಂದರೆಯಲ್ಲಿದ್ದಾರೆ. ಇವರ ಸಂಕಷ್ಟ ಅರಿಯದೆ ಸರ್ಕಾರ ಇಂತಹ ಕಾನೂನು ತಂದು ಮತ್ತಷ್ಟು ನೋವು ನೀಡುತ್ತಿದೆ. ಇಡೀ ದಕ್ಷಿಣ ಭಾರತಕ್ಕೆ ನೀರುಣಿಸುವ ಕೊಡಗು ಜಿಲ್ಲೆಯಲ್ಲಿ ಕೃಷಿ ಭೂಮಿ ರಕ್ಷಣೆಗೆ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು. ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಕೃಷಿಯೊಂದಿಗೆ ರೈತನನ್ನು ರಕ್ಷಿಸಲು ಮುಂದಾಗಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಖಜಾಂಚಿ ರಾಜಪ್ಪ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಚಿಮ್ಮಣಮಾಡ ಪೊನ್ನಪ್ಪ ಇದ್ದರು.