*ಕೊಡ್ಲಿಪೇಟೆ, ಆ. 13: ಭಾರೀ ಗಾಳಿ ಮಳೆಯಿಂದಾಗಿ ಹಲವಾರು ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಹಿನ್ನೆಲೆ, ಕೊಡ್ಲಿಪೇಟೆ ಹೋಬಳಿಯ ಬೆಸೂರು ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಸಾರ್ವಜನಿಕರು ಕತ್ತಲೆಯ ಬದುಕು ಸಾಗಿಸುತ್ತಿದ್ದಾರೆ.

ಬೆಸೂರು ವ್ಯಾಪ್ತಿಯ ಗ್ರಾಮಗಳಾದ ಕಟ್ಟೆಪುರ, ನಿಲುವಾಗಿಲು, ಕಾಫಿಕಣ, ಆಗಳಿ ಗ್ರಾಮಗಳಿಗೆ ಕಳೆದ 9 ದಿನಗಳಿಂದ ವಿದ್ಯುತ್ ಸ್ಥಗಿತಗೊಂಡಿದ್ದು, ಈ ವ್ಯಾಪ್ತಿಯ ಸುಮಾರು 300 ಮನೆಗಳು ಕತ್ತಲೆಯಲ್ಲಿವೆ.

ಇಂದಿಗೂ ವಿದ್ಯುತ್ ಇಲಾಖಾ ಸಿಬ್ಬಂದಿಗಳು ಈ ಗ್ರಾಮಗಳತ್ತ ಆಗಮಿಸಿಲ್ಲ. ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಸಂತೋಷ್ ಆರೋಪಿಸಿದ್ದಾರೆ.

ವಿದ್ಯುತ್ ಇಲ್ಲದೇ ಇರುವದರಿಂದ ಈ ಭಾಗದ ಸುಮಾರು 300ಕ್ಕೂ ಅಧಿಕ ಮನೆಗಳಿಗೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದೆ. 11 ಕೆ.ವಿ. ವಿದ್ಯುತ್ ಮಾರ್ಗವೂ ದುರಸ್ತಿಯಾಗದ ಹಿನ್ನೆಲೆ ಭಾರೀ ಸಮಸ್ಯೆ ಎದುರಿಸುವಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕುಡಿಯುವ ನೀರಿಗೂ ಸಮಸ್ಯೆಯಾಗಿರುವದರಿಂದ ಕೂಲಿ ಕಾರ್ಮಿಕರು ಹಣ ನೀಡಿ ಟ್ಯಾಂಕರ್ ನೀರು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಸಂಬಂಧಿಸಿದ ಇಲಾಖಾಧಿಕಾರಿಗಳು ಕುಡಿಯುವ ನೀರಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಮಾರ್ಗವನ್ನು ಆದ್ಯತೆಯ ಮೇಲೆ ದುರಸ್ತಿಗೊಳಿಸಲು ಕ್ರಮ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.