ಮಡಿಕೇರಿ ಆ. 12: ತಲಕಾವೇರಿಯಲ್ಲಿ ದುರ್ಘಟನೆ ನಡೆದು ಬುಧವಾರಕ್ಕೆ ಏಳು ದಿನಗಳು ಕಳೆದಿವೆ. ಆದರೆ, ತಲಕಾವೇರಿಯಲ್ಲಿ ನಿತ್ಯ ಪೂಜೆ ಮಾತ್ರ ಇನ್ನೂ ಪ್ರಾರಂಭಗೊಂಡಿಲ್ಲ. ತಲಕಾವೇರಿಯ ಇತಿಹಾಸದಲ್ಲಿಯೇ ಈ ರೀತಿ ನಿತ್ಯ ಪೂಜೆ ನಡೆಯದಿ ರುವದು ಪ್ರಪ್ರಥಮವೆನ್ನಲಾಗಿದೆ. ಈ ನಡುವೆ ತಲಕಾವೇರಿಯ ಅರ್ಚಕ ಪ್ರಮುಖರಲ್ಲಿ ಓರ್ವರಾದ ಪ್ರಶಾಂತಾಚಾರ್ ತಮ್ಮ ತೀವ್ರ ಅಸಮಾಧಾನ ಹೊರಗೆಡಹಿದ್ದಾರೆ. “ಶಕ್ತಿ”ಯೊಂದಿಗೆ ಅವರು ವ್ಯಕ್ತಪಡಿಸಿದ ಅಭಿಪ್ರಾಯ ಹೀಗಿದೆ:-” ಸೋಮವಾರ ದಿನ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ತಲಕಾವೇರಿ ಯಲ್ಲಿ ನಿತ್ಯ ಪೂಜೆ ನಡೆಸುವ ಕುರಿತು ನಿರ್ಧರಿಸಲು ಪ್ರಮುಖರು ಭಾಗಮಂಡಲದಲ್ಲಿ ಸಭೆ ನಡೆಸಿ ಚರ್ಚಿಸಿದ್ದಾರೆ. ಆದರೆ, ಭಾಗಮಂಡಲ ದಲ್ಲಿಯೇ ಈಗ ನೆಲೆಸಿರುವ ಅರ್ಚಕ ವರ್ಗವನ್ನು ಕನಿಷ್ಟ ಸೌಜನ್ಯಕ್ಕಾದರೂ ಸಮಿತಿಯವರಾಗಲೀ, ಇತರರಾಗಲೀ ಕರೆಯಲಿಲ್ಲ. ನಮ್ಮ ಅಭಿಪ್ರಾಯ ಕೇಳುವದನ್ನು ನಿರ್ಲಕ್ಷ್ಯ ಮಾಡಿರುವದು ನಮಗೆ ತೀವ್ರ ಬೇಸರವುಂಟು ಮಾಡಿದೆ. ಇಷ್ಟಾಗಿ ಇನ್ನೂ ತಲಕಾವೇರಿಯಲ್ಲಿ ಪೂಜೆಯೂ ಪ್ರಾರಂಭಗೊಳ್ಳ ದಿರುವದು ಮುಜುಗರವುಂಟು ಮಾಡಿದೆ. ಕ್ಷೇತ್ರ ತಂತ್ರಿಯವರು ಬಂದು ಪ್ರಾರಂಭಿಕ ಕಲಶ ಪೂಜೆ ನಡೆಸಿ ಬಳಿಕ ಪೂಜೆ ಪ್ರಾರಂಭಿಸ ಬಹುದು” ಎಂದು ಪ್ರಶಾಂತಾಚಾರ್ ತಿಳಿಸಿದರು. ಆದರೆ, ಈ ಕಾರ್ಯ ತುರ್ತಾಗಿ ನಡೆಯಬೇಕಿದೆ ಎಂದರು.

ಮುಂದಿನ ದಿನಗಳಲ್ಲಿ ತಲಕಾವೇರಿಯ ಮೂಲ ಅರ್ಚಕರು ಯಾವತ್ತಿನಿಂದ ಪೂಜೆ ಕೈಗೊಳ್ಳ ಬಹುದು ಎಂಬ ಪ್ರಶ್ನೆಗೆ ಅವರ ಅಭಿಪ್ರಾಯ ಹೀಗಿದೆ:- “ಇದೀಗ ಇಬ್ಬರ ಮೃತ ದೇಹ ಮಾತ್ರ ಸಿಕ್ಕಿದೆ. ಪ್ರಸ್ತುತ ಕೇವಲ ಅಗ್ನಿ ಸ್ಪರ್ಶದಿಂದ ಮಾತ್ರ ಅವರುಗಳ ದೇಹಗಳನ್ನು ದಹನ ಮಾಡಲಾಗಿದೆ. ಇನ್ನೂ ಅಗತ್ಯ ಸಂಸ್ಕಾರ ವಿಧಿ ವಿಧಾನಗಳು ನಡೆಯಬೇಕು. ಅಸ್ಥಿಗಳನ್ನು ತೆಗೆದು ಶುದ್ಧಗೊಳಿಸಿ ಸಂಸ್ಕಾರ ಕ್ರಿಯೆಗಳನ್ನು ಕೈಗೊಳ್ಳಬೇಕಿದೆ. ಜೊತೆಗೆ ಇನ್ನೂ ಮೂವರ ಪಾರ್ಥಿವ ಶರೀರಗಳೂ ಸಿಗಬೇಕು. ಈ ಮೃತ ಶರೀರಗಳಿಗೂ ಅಂತ್ಯ ಸಂಸ್ಕಾರಗಳು ಹಾಗೂ ಇತರ ವಿಧಿವಿಧಾನಗಳು ನಡೆಯಬೇಕು. ಅಕಸ್ಮಾತ್ ಈ ಮೂರು ಮೃತ ಶರೀರಗಳು ಶೋಧದ ಬಳಿಕವೂ ಸಿಗುವುದಿಲ್ಲವೆನ್ನುವುದು ಖಾತರಿಯಾದರೆ

(ಮೊದಲ ಪುಟದಿಂದ) ಬೇರೆ ಕ್ರಮವನ್ನೇ ಅನುಸರಿಸಬೇಕಾಗಿದೆ. ಪಾಲಾಶದ ಎಲೆಯ ಕಡ್ಡಿಯಲ್ಲಿ ಮಾನವಾಕೃತಿ ಮಾಡಿ ಅದಕ್ಕೆ ಪ್ರಾಣ ಪ್ರತಿಷ್ಠೆ ನಡೆಸಿ ಬಳಿಕ ಅಗ್ನಿಯಲ್ಲಿ ದಹಿಸಬೇಕಾಗುತ್ತದೆ. ಆ ನಂತರ ಉಳಿದ ಸಂಸ್ಕಾರ ಕ್ರಿಯೆಗಳನ್ನು ವಿಧಿವತ್ತಾಗಿ ನೆರವೇರಿಸಬೇಕಾಗುತ್ತದೆ. ಅಕಸ್ಮಾತ್ ಈ ಕ್ರಿಯೆ ನಡೆದ ಬಳಿಕವೇನಾದರೂ ಮೃತ ಶರೀರಗಳು ಸಿಕ್ಕಿದರೆ, ಮತ್ತೆ ಈ ಮೃತ ಶರೀರಗಳಿಗೆ ಪ್ರಾರಂಭದಿಂದಲೇ ಅಂತ್ಯ ಸಂಸ್ಕಾರ ಕ್ರಿಯೆಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ಎಲ್ಲ ಕ್ರಿಯೆಗಳು ನಡೆದ ಬಳಿಕವಷ್ಟೆ ತಲಕಾವೇರಿಯ ಅರ್ಚಕ ಕುಟುಂಬ ವರ್ಗಕ್ಕೆ ಸೂತಕದ ಅಶುದ್ಧತೆ ಹೋಗಲಿದ್ದು ಬಳಿಕವಷ್ಟೆ ನಾವುಗಳು ಪೂಜೆಗಳನ್ನು ಮಾಡಬಹುದಾಗಿದೆ. ಅಲ್ಲ್ಲಿವರೆಗೆ ಸಮಿತಿಯು ತಾತ್ಕಾಲಿಕ ವ್ಯವಸ್ಥೆ ನಡೆಸಬೇಕು. ಆದರೆ, ನಿತ್ಯ ಪೂಜೆ ಮಾತ್ರ ಈ ಹಿಂದಿನಂತೆಯೇ ಕ್ರಮ ಬದ್ಧವಾಗಿ ನಡೆಯಬೇಕಾಗಿದೆ” ಎಂದು ಪ್ರಶಾಂತಾಚಾರ್ ಆಶಿಸಿದರು. ಈ ಹಿಂದೆ ಬಹಳಷ್ಟು ವರ್ಷಗಳ ಕಾಲ ದೇವಾಲಯದ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ಸಂಪತ್‍ಕುಮಾರ್ ಅವರನ್ನು “ಶಕ್ತಿ” ಅಭಿಪ್ರಾಯ ಬಯಸಿದಾಗ ತಲಕಾವೇರಿಯಲ್ಲಿ ಈ ಹಿಂದೆ ಅರ್ಚಕ ಕುಟುಂಬಕ್ಕೆ ಯಾವದೇ ಸಂದರ್ಭ ಸೂತಕ ಬಂದಾಗ ಬದಲೀ ವ್ಯವಸ್ಥೆಯೊಂದಿಗೆ ತಕ್ಷಣದಿಂದಲೇ ಅರ್ಚಕರ ಮುತುವರ್ಜಿಯಿಂದಲೇ ನಿತ್ಯ ಪೂಜೆ ನಿರಾತಂಕವಾಗಿ ನಡೆಯಲು ವ್ಯವಸ್ಥೆಯಾಗುತ್ತಿತ್ತು. ಆದರೆ, ಈಗಿನ ರೀತಿಯಲ್ಲಿ ಪೂಜೆ ನಿಂತಿರುವದು ಇತಿಹಾಸದಲ್ಲಿ ಇದೇ ಮೊದಲಾಗಿದೆ. ಇನ್ನಾದರೂ ವಿಳಂಬ ಮಾಡದೆ ತಕ್ಷಣ ವ್ಯವಸ್ಥೆ ಮಾಡಬೇಕಾಗಿದೆ ಎಂದು ಆಶಿಸಿದರು. - “ಚಕ್ರವರ್ತಿ”