ಮಡಿಕೇರಿ, ಆ. 12: ಕಡಗದಾಳು ಗ್ರಾ.ಪಂ. ವ್ಯಾಪ್ತಿಯ ಬೊಟ್ಲಪ್ಪ ದೇಗುಲ ರಸ್ತೆ ಮಧ್ಯೆ ಭೂಕುಸಿತದೊಂದಿಗೆ ಎಂಟು ಮನೆಗಳು ಅಪಾಯದ ಅಂಚಿನಲ್ಲಿದ್ದು, ಇನ್ನೊಂದೆಡೆ ನೀರುಕೊಲ್ಲಿ ಕಲ್ಲುಕೋರೆ ಬಳಿ ನಾಲ್ಕಾರು ಮನೆಗಳು ಬರೆ ಜರಿದು ಸಮಸ್ಯೆಯಲ್ಲಿವೆ. ಈ ಪ್ರದೇಶಗಳ 14 ಕುಟುಂಬಗಳನ್ನು ಈಗಾಗಲೇ ಸ್ಥಳಾಂತರಗೊಳಿಸಿ, ಅಲ್ಲಿನ ಸರಕಾರಿ ಶಾಲೆಯಲ್ಲಿ ಕಾಳಜಿಕೇಂದ್ರ ತೆರೆಯಲಾಗಿದೆ. ಈ ಕಾಳಜಿ ಕೇಂದ್ರದಲ್ಲಿ 35 ಮಂದಿ ಆಸರೆ ಪಡೆದಿದ್ದಾರೆ. ಅನಾಹುತ ಪ್ರದೇಶಗಳಿಗೆ ಇಂದು ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ತಹಶೀಲ್ದಾರ್ ಪಿ.ಎಸ್. ಮಹೇಶ್ ಹಾಗೂ ಕಂದಾಯ ಸಿಬ್ಬಂದಿ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಲ್ಲಿನ ನಿವಾಸಿಗಳು ಸಮಸ್ಯೆಗಳ ಕುರಿತು ಗಮನ ಸೆಳೆದರು.ಸೂಕ್ತ ಕ್ರಮ : ಜಿ.ಪಂ. ಅಧ್ಯಕ್ಷರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಲಹೆ ನೀಡಿ, ಅಪಾಯದಲ್ಲಿರುವ ಕುಟುಂಬಗಳಿಗೆ ಕಾಳಜಿ (ಮೊದಲ ಪುಟದಿಂದ) ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆಯೊಂದಿಗೆ ಆಹಾರ, ಕುಡಿಯಲು ಬಿಸಿ ನೀರು, ಇನ್ನಿತರ ಸೌಲಭ್ಯ ಒದಗಿಸಬೇಕೆಂದು ತಹಶೀಲ್ದಾರ್ ಮುಖಾಂತರ ಗಮನ ಸೆಳೆದರು. ತಹಶೀಲ್ದಾರ್ ಮಹೇಶ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ಈ ಸಂಬಂಧ ತಾಂತ್ರಿಕವಾಗಿ ಇಂಜಿನಿಯರ್ಗಳ ಸಲಹೆ ಪಡೆದು, ಜಿಲ್ಲಾಡಳಿತದ ಮಾರ್ಗದರ್ಶನದಂತೆ ಕ್ರಮಕೈಗೊಳ್ಳಲಾಗುವುದು ಎಂದರು. ಜಿ.ಪಂ. ಅಧ್ಯಕ್ಷರ ಭೇಟಿ ಸಂದರ್ಭ ಅಲ್ಲಿನ ಪ್ರಮುಖರಾದ ಕಿರಣ್ ಸೇರಿದಂತೆ ಕಂದಾಯ ಇಲಾಖೆಯ ನಿರೀಕ್ಷಕ ಶ್ರೀನಿವಾಸ್, ಗ್ರಾಮಲೆಕ್ಕಿಗರಾದ ಶ್ವೇತಾ, ಮಾಲಾಶ್ರೀ, ಗಣಪತಿ ಮೊದಲಾದವರು ಉಪಸ್ಥಿತರಿದ್ದರು. ಕಾಳಜಿ ಕೇಂದ್ರದ ಬಗ್ಗೆ ಶಾಲಾ ಮುಖ್ಯ ಶಿಕ್ಷಕಿ ಗಂಗಮ್ಮ ಹಾಗೂ ಸಹ ಶಿಕ್ಷಕರು, ಆರೋಗ್ಯ ಕಾರ್ಯಕರ್ತೆಯರು ಗಮನ ಹರಿಸಿದ್ದು, ಕಂಡು ಬಂತು.