ಮಡಿಕೇರಿ, ಆ. 12: ಸತತ ಏಳನೇ ದಿನವಾದ ಇಂದು ತಲಕಾವೇರಿಯ ದುರಂತ ಸ್ಥಳದಲ್ಲಿ, ಇನ್ನೂ ಪತ್ತೆಯಾಗದಿರುವ ಅರ್ಚಕ ಕುಟುಂಬದ ಮೂವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದರೂ ಈ ಸಂಜೆ ತನಕ ಯಾವದೇ ಸುಳಿವು ಲಭಿಸಿಲ್ಲ. ಬದಲಾಗಿ ನಿನ್ನೆ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಅವರ ಮೃತದೇಹ ಪತ್ತೆಯಾಗಿದ್ದ ದುರ್ಗಮ ಪ್ರದೇಶದ ಅನತಿ ದೂರದಲ್ಲಿ ನಾಲ್ಕು ದನಗಳ ಕಳೇಬರ ಗೋಚರಿಸಿವೆ.ಮಡಿಕೇರಿ ಪೊಲೀಸ್ ಉಪ ಅಧೀಕ್ಷಕ ಬಿ.ಪಿ. ದಿನೇಶ್‍ಕುಮಾರ್ ಹಾಗೂ ಲೋಕೋಪಯೋಗಿ ಇಂಜಿನಿಯರ್‍ಗಳಾದ ಚನ್ನಕೇಶವ, ಪ್ರಮೋದ್, ದೇವರಾಜ್ ಸೇರಿದಂತೆ ಕೊಡಗು ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ಅನನ್ಯ ವಾಸುದೇವ್ ಮಾರ್ಗದರ್ಶನದಲ್ಲಿ ಶೋಧ ಕಾರ್ಯ ನಡೆಸಲಾಯಿತು. ನಾರಾಯಣಾಚಾರ್ ಮನೆ ನಾಮಾವಶೇಷಗೊಂಡಿರುವ ಸ್ಥಳದಲ್ಲಿ ಮೂರು ಹಿಟಾಚಿ ಯಂತ್ರಗಳು ಕಾರ್ಯೋನ್ಮುಖವಾಗಿದ್ದರೂ, ಅರ್ಚಕರ ಶೆಡ್‍ನಲ್ಲಿದ್ದ ವಾಹನಗಳ ತುಣುಕು, ಕೃಷಿ ಪರಿಕರಗಳಷ್ಟೇ ಪತ್ತೆಯಾಯಿತು.
ಭಾಗಮಂಡಲ ಠಾಣಾಧಿಕಾರಿ ಹೆಚ್. ಮಹದೇವ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಂತೆ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಅಗ್ನಿ ಶಾಮಕ ದಳ, ಕೊಡಗು ಪೊಲೀಸ್ ವಿಪತ್ತು ನಿರ್ವಹಣಾ ತಂಡ, ಅರಣ್ಯ ಸಿಬ್ಬಂದಿ ಪ್ರತ್ಯೇಕ ತಂಡದೊಂದಿಗೆ ದುರಂತ ಪ್ರದೇಶದ (ಮೊದಲ ಪುಟದಿಂದ) ಕೆಳಭಾಗದ ದುರ್ಗಮ ಹಾದಿಯ ಉದ್ದಕ್ಕೂ ಕಾಲ್ನಡಿಗೆಯಲ್ಲಿ ತೆರಳಿ ಹುಡುಕಾಟ ನಡೆಸಿತು. (ಮೊದಲ ಪುಟದಿಂದ) ಕೆಳಭಾಗದ ದುರ್ಗಮ ಹಾದಿಯ ಉದ್ದಕ್ಕೂ ಕಾಲ್ನಡಿಗೆಯಲ್ಲಿ ತೆರಳಿ ಹುಡುಕಾಟ ನಡೆಸಿತು. ತೆರವುಗೊಳಿಸುವ ಕಾರ್ಯ ಪೂರ್ಣಗೊಳ್ಳುವ ಹಂತ ತಲಪಿದೆ.
ಜಿ.ಪಂ. ಅಧ್ಯಕ್ಷರ ಭೇಟಿ: ಸತತ ಏಳನೇ ದಿನದ ಕಾರ್ಯಾಚರಣೆ ವೇಳೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರು ಖುದ್ದು ತೆರಳಿ ತಲಕಾವೇರಿಯಲ್ಲಿ ಪರಿಶೀಲನೆ ನಡೆಸಿದರು. ಉಪಸ್ಥಿತ ಅಧಿಕಾರಿಗಳು ಹಾಗೂ ತಂಡದೊಂದಿಗೆ ಚರ್ಚೆ ನಡೆಸಿ, ಶುಕ್ರವಾರ ಸಚಿವರು ಭೇಟಿ ನೀಡುವಷ್ಟರಲ್ಲಿ ರಸ್ತೆ ಮಾರ್ಗ ಸುಗಮಗೊಳಿಸಿ, ಕ್ಷೇತ್ರದ ಪೂಜೆಗೆ ತೊಡಕಾಗದಂತೆ ಕಾಳಜಿ ವಹಿಸುವಂತೆ ಸಲಹೆ ನೀಡಿದರು. ಆ ವೇಳೆಗೆ ಎಲ್ಲವೂ ಸುಗಮವಾಗುವ ವಿಶ್ವಾಸವನ್ನು ಸ್ಥಳದಲ್ಲಿದ್ದ ವಿವಿಧ ಅಧಿಕಾರಿಗಳು, ಇಂಜಿನಿಯರ್‍ಗಳು ಹೊರಗೆಡವಿದರು. ಭಾಗಮಂಡಲ ಗ್ರಾ.ಪಂ. ಮಾಜಿ ಸದಸ್ಯ ಕಾಳನ ರವಿ ಮತ್ತಿತರರು ಹಾಜರಿದ್ದರು.