ಮಡಿಕೇರಿ, ಆ. 12: ಕೊಡಗಿನಲ್ಲಿ ಮಳೆಯಿಂದ ಪ್ರವಾಹ ಉಂಟಾಗಿ ಮನೆಗಳಿಗೆ ನೀರು ನುಗ್ಗಿ ನೂರಾರು ಕುಟುಂಬಗಳು ನಿರಾಶ್ರಿತರಾಗುತ್ತಿದ್ದು, ಪ್ರತಿ ಬಾರಿ ಎದುರಾಗುವ ಈ ಸಮಸ್ಯೆಗೆ ಸರಕಾರ ಶಾಶ್ವತ ಪರಿಹಾರ ಯೋಜನೆ ರೂಪಿಸುವಂತಾಗಬೇಕೆಂದು ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.ಪ್ರವಾಹ ಪೀಡಿತ ಪ್ರದೇಶಗಳಾದ ಕುಶಾಲನಗರದ ಕುವೆಂಪು ಬಡಾವಣೆ, ಸಾಯಿ ಬಡಾವಣೆ, ಕರಡಿಗೋಡು, ಕೊಂಡಂಗೇರಿ, ಚಾಮಿಯಾಲ, ಚೆರಿಯಪರಂಬು, ತೆಪ್ಪದಕಂಡಿ ಪ್ರದೇಶಗಳಿಗೆ ಇಂದು ಭೇಟಿ ನೀಡಿದ್ದ ಅವರು ನಿರಾಶ್ರಿತರ ಸಮಸ್ಯೆಗಳನ್ನು ಆಲಿಸಿದರು.ಸಮಸ್ಯೆಗಳನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಪ್ರವಾಹ ದಿಂದ ಮನೆ ಕಳೆದುಕೊಂಡವರಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಜೊತೆಗೆ ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದವರಿಗೆ ಬಾಡಿಗೆ ಹಣ ನೀಡುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಪ್ರಸ್ತುತ ಅಧಿಕಾರದಲ್ಲಿರುವ ಸರಕಾರ ಕೂಡ ತಾತ್ಕಾಲಿಕ ಪರಿಹಾರ ನೀಡದೆ ಶಾಶ್ವತ ಪರಿಹಾರ ವ್ಯವಸ್ಥೆ ಕಲ್ಪಿಸಬೇಕು. ಸಂತ್ರಸ್ತರಿಗೆ ಮನೆ ಒದಗಿಸುವ ಕೆಲಸ ಮಾಡಬೇಕು ಎಂದರು. ಜೆಡಿಎಸ್ ಪಕ್ಷ ಕೂಡ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿದೆ ಎಂದ ಅವರು, ತಾನು ಸಂಕಷ್ಟದಲ್ಲಿರುವ ಕುಟುಂಬಗಳ ಸಮಸ್ಯೆಗಳನ್ನು ಆಲಿಸಲು ಬಂದಿದ್ದೇನೆ ಹೊರತು ಯಾವುದೇ ರಾಜಕೀಯ ಉದ್ದೇಶದಿಂದಲ್ಲ

(ಮೊದಲ ಪುಟದಿಂದ) ಎಂದು ಸ್ಪಷ್ಟಪಡಿಸಿದರು. ಜಂಬೂರಿಗೂ ಭೇಟಿ ನೀಡಿದ ನಿಖಿಲ್ ಅಲ್ಲಿ ನಿರ್ಮಾಣ ವಾಗಿರುವ ಹೊಸ ಮನೆಗಳಲ್ಲಿ ಆಶ್ರಯ ಪಡೆದಿರುವ ಕುಟುಂಬಗಳೊಂದಿಗೆ ಮಾತುಕತೆ ನಡೆಸಿದರು.

ಆರತಿ ಎತ್ತಿದ ಮಹಿಳೆಯರು

ನಿಖಿಲ್ ಕುಮಾರಸ್ವಾಮಿ ತೆಪ್ಪದಕಂಡಿ ಹಾಗೂ ಕರಡಿಗೋಡಿಗೆ ಭೇಟಿ ನೀಡಿದ ವೇಳೆ ಅಲ್ಲಿನ ಮಹಿಳೆಯರು ನಿಖಿಲ್‍ಗೆ ಆರತಿ ಎತ್ತಿ ಬರಮಾಡಿಕೊಂಡರು. ಭೇಟಿ ನೀಡಿದ ಕಡೆಗಳಲ್ಲಿ ಸ್ಥಳೀಯರೊಂದಿಗೆ ಆತ್ಮೀಯವಾಗಿ ಮಾತನಾಡಿದ ನಿಖಿಲ್ ನಿರಾಶ್ರಿತರ ಸಮಸ್ಯೆ ಪರಿಹಾರಕ್ಕೆ ತನ್ನಿಂದಾದ ಸಹಕಾರ ನೀಡುವುದಾಗಿ ಭರವಸೆಯಿತ್ತರು. ಮಹಿಳೆಯೊಬ್ಬರು ತಮ್ಮ ಸಂಕಷ್ಟ ಹೇಳಿಕೊಂಡಾಗ ನಿಖಿಲ್ ವೈಯಕ್ತಿಕ ಧನ ಸಹಾಯವನ್ನು ಮಾಡಿದರು.

ಕಾದುನಿಂತ ಮಕ್ಕಳು

ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳುತ್ತಿದ್ದ ವೇಳೆ ನಂಜರಾಯಪಟ್ಟಣ ದಲ್ಲಿ ಸ್ಥಳೀಯ ಮಕ್ಕಳು ಹಾಗೂ ಹಾಡಿ ಮಕ್ಕಳು ನಿಖಿಲ್ ಕುಮಾರಸ್ವಾಮಿ ಯವರನ್ನು ನೋಡುವುದಕ್ಕಾಗಿ ಕಾದು ನಿಂತಿದ್ದರು. ಈ ವೇಳೆ ಅವರ ಬಳಿಗೆ ತೆರಳಿದ ನಿಖಿಲ್ ಅವರನ್ನು ಕಂಡು ಹರ್ಷಗೊಂಡ ಮಕ್ಕಳು ಅವರೊಂದಿಗೆ ನಿಂತು ‘ಫೋಟೋ’ ಕ್ಲಿಕ್ಕಿಸಿಕೊಂಡರು. ನಿಖಿಲ್ ಅಭಿನಯದ ಸಿನಿಮಾಗಳ ಹೆಸರನ್ನು ಹೇಳುತ್ತಾ ‘ಫೋಟೋ’ಗೆ ‘ಫೋಸ್’ ಕೊಟ್ಟ ಮಕ್ಕಳು ನಂತರ ‘ಟಾಟಾ’ ಮಾಡುವ ಮೂಲಕ ಕಳುಹಿಸಿಕೊಟ್ಟರು.

ತಲಕಾವೇರಿಗೆ ಭೇಟಿ ನೀಡಲಿಲ್ಲ

ನಿಖಿಲ್ ಕುಮಾರಸ್ವಾಮಿ ತಲಕಾವೇರಿಯ ಭೂಕುಸಿತ ಉಂಟಾದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತಾದರೂ, ಹೊಸದಾಗಿ ಮದುವೆಯಾದವರು ತಲಕಾವೇರಿಗೆ ಮೊದಲ ಬಾರಿ ಪತಿ-ಪತ್ನಿ ಸಹಿತರಾಗಿ ತೆರಳಬೇಕು ಎಂಬ ಸಂಪ್ರದಾಯ ಇರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿವಾಹವಾಗಿರುವ ನಿಖಿಲ್ ಇಂದು ಒಬ್ಬರೆ ಜಿಲ್ಲೆಗೆ ಆಗಮಿಸಿದ್ದರಿಂದ ತಲಕಾವೇರಿ ಭೇಟಿಯನ್ನು ಮೊಟಕು ಗೊಳಿಸಿದ್ದಾರೆ. ಸದ್ಯದಲ್ಲಿಯೆ ಕುಟುಂಬ ಸಹಿತ ತಲಕಾವೇರಿಗೆ ಬರಲಿದ್ದಾರೆ ಎಂದು ಕೊಪ್ಪ ಗೇಟ್‍ನಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ತಿಳಿಸಿದರು.

ಕಾವೇರಿಗೆ ಬಾಗಿನ

ಕೊಪ್ಪ ಗೇಟ್‍ನಲ್ಲಿ ಬಂದಿಳಿದ ನಿಖಿಲ್ ಕುಮಾರಸ್ವಾಮಿ ಅಲ್ಲಿರುವ ಕಾವೇರಿ ಪ್ರತಿಮೆಗೆ ನಮಿಸಿದರಲ್ಲದೆ ಕಾವೇರಿ ನದಿಗೆ ಬಾಗಿನ ಅರ್ಪಿಸಿದರು.

ಈ ಸಂದರ್ಭ ಜೆಡಿಎಸ್ ಪದಾಧಿಕಾರಿಗಳಾದ ವಿಶ್ವ, ಜಾಷೀರ್, ರವಿಕಿರಣ್, ರವಿಕುಮಾರ್, ಎನ್.ಸಿ. ಸುನಿಲ್, ಕಲೀಲ್ ಬಾದ್‍ಶಾ, ಲೀಲಾ ಶೇಷಮ್ಮ, ಡೇನಿ ಬೋರೋಸ್, ಶಿವದಾಸ್, ಮಂಜುನಾಥ್, ಜಯಮ್ಮ, ಇಸಾಕ್, ಮನ್ಸೂರ್ ಆಲಿ ಮತ್ತಿತರರು ಇದ್ದರು.