ಕೊಡಗಿನ ತಲಕಾವೇರಿ! ತಲತಲಾಂತರದಿಂದ ಸಮಸ್ತ ಹಿಂದುಗಳು ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುವ ಪುಣ್ಯಕ್ಷೇತ್ರ. ನಮ್ಮ ನಾಡಿನ ಹೆಮ್ಮೆಯ ಜೀವನದಿ ಕಾವೇರಿ ಮಾತೆಯ ಉಗಮಸ್ಥಾನ. ಅಲ್ಲಿನ ದೇವಳದ ಪರ್ಯಾಯ ಪ್ರಧಾನ ಅರ್ಚಕರಾಗಿ, ಹಲವಾರು ವರ್ಷಗಳಿಂದ, ಧಾರ್ಮಿಕ, ಸಾಮಾಜಿಕ, ಸಹಕಾರಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ಕೊಡಗಿನ ಸಂಘಪರಿವಾರದ ವಿವಿಧ ಸಂಘಟನೆಗಳ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದವರು ಟಿ.ಎಸ್. ನಾರಾಯಣಾಚಾರ್ ಅವರ ಕುಟುಂಬ; ಪ್ರಕೃತಿ ವಿಕೋಪಕ್ಕೆ ಗುರಿಯಾಗಿ ನಿಂತ ನೆಲದಲ್ಲಿ ತಮ್ಮ ಮನೆಯಲ್ಲೇ ನೆಲಸಮಾಧಿಯಾದ ಹೃದಯವಿದ್ರಾವಕ ದುರ್ಘಟನೆ ಸಂಭವಿಸಿರುವುದು, ಇಡೀ ಕೊಡಗನ್ನು ಬೆಚ್ಚಿಬೀಳಿಸಿದಂತೆ, ಜನಸೇವಾ ವಿದ್ಯಾ ಕೇಂದ್ರದ ಬಳಗಕ್ಕೂ ಕಂಡು ಕೇಳರಿಯದಂತಹ ಆಘಾತವಾಗಿದೆ. ಸಂಘದ ಹಿರಿಯ ಸ್ವಯಂಸೇವಕರಾಗಿದ್ದ ನಾರಾಯಣಾಚಾರ್ ಅವರ ಮನೆ, ಸಂಘದ ಪ್ರಾಂತ ಬೈಠಕ್ಕಿನಿಂದ ಹಿಡಿದು ಅನೇಕ ಹಿಂದೂ ಚಟುವಟಿಕೆಗಳಿಗೆ ಸಾಕ್ಷಿಭೂತವಾದ ಹಿಂದು ಮನೆ ಆಗಿತ್ತು!

ಜನಸೇವಾ ವಿದ್ಯಾಕೇಂದ್ರ ಮತ್ತು ಅವರ ಸಂಬಂಧ ಅತ್ಯಂತ ಹಳೆಯದು. ಅವರ ಮೂರು ಮಕ್ಕಳಲ್ಲಿ ಏಕಮೇವ ಪುತ್ರ ಬದರಿ ಪ್ರಸಾದ್ ಜನಸೇವಾ ವಿದ್ಯಾಕೇಂದ್ರದ ಹಿರಿಯ ವಿದ್ಯಾರ್ಥಿ; ಮನೆಯಲ್ಲೇ ಕೆಲಸ ಮಾಡುತ್ತಿದ್ದಾಗ ಬಿದ್ದು ಮೂಳೆ ಮುರಿತ ಕ್ಕೊಳಗಾಗಿ, ಅನೇಕ ವರ್ಷಗಳ ವೈದ್ಯಕೀಯ ಶುಶ್ರೂಷೆ ಯಾಗಿತ್ತಾದರೂ ಆತನನ್ನು ಉಳಿಸಿಕೊಳ್ಳಲಾಗದೆ ಕೆಲವು ವರ್ಷಗಳ ಹಿಂದೆ ವಿಧಿವಶನಾದ. ಸಂಘದ ಪ್ರಚಾರಕರಾಗಿ ಅನೇಕ ವರ್ಷಗಳ ಕಾಲ ಜನಸೇವಾ ವಿದ್ಯಾ ಕೇಂದ್ರದಲ್ಲಿ ಸೇವೆ ಮಾಡಿದ್ದ ಇವರ ಸೋದರ ಬಂಧು ವಾಸುದೇವಾಚಾರ್ ತೀವ್ರ ಅನಾರೋಗ್ಯದ ಕಾರಣದಿಂದ ಇತ್ತೀಚೆಗೆ ಎರಡು ವರ್ಷಗಳ ಹಿಂದೆ ಅವರೂ ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿ ದರು. ನಾರಾಯಣಾಚಾರ್ ಅವರ ಹಿರಿಯ ಸೋದರ, ಸ್ವಾಮಿ ಆನಂದತೀರ್ಥರ ಒಡನಾಟ ಜನಸೇವಾ ವಿದ್ಯಾ ಕೇಂದ್ರ ಮತ್ತು ವೇದವಿಜ್ಞಾನ ಗುರುಕುಲದ ನಡುವೆ ಅತ್ಯಂತ ಘನಿಷ್ಠವಾಗಿತ್ತು.

ತೊಂಭತ್ತರ ದಶಕದಲ್ಲಿ ಅಂದಿನ ಸಂಘದ ಪ್ರಾಂತ ಪ್ರಚಾರಕರಾಗಿದ್ದ ಸು. ರಾಮಣ್ಣ ಅವರ ಸೂಚನೆಯಂತೆ - ಜನಸೇವಾ ವಿದ್ಯಾ ಕೇಂದ್ರದ ಸಲುವಾಗಿ ಕೊಡಗು ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದ ಸಂದರ್ಭ ನೆಲ್ಲಮಕ್ಕಡ ಶಂಭಣ್ಣ, ಮಚ್ಚರಂಡ ಮಣಿ ಆದಿಯಾಗಿ ಅನೇಕ ಸಂಘದ ಕಾರ್ಯಕರ್ತರೊಂದಿಗೆ ನಾರಾಯಣಾಚಾರ್ ಕೂಡಾ ನಮ್ಮೊಂದಿಗೆ ಹೆಸರಾಂತ ಕೊಡುಗೈ ದಾನಿಗಳ ಧನಧಾರೆ ಜನಸೇವಾದತ್ತ ಹರಿಯುವಂತೆ ಮಾಡಿದ್ದರು. ಸಾಮಾಜಿಕ ಕಳಕಳಿ, ಸಂಘಬದ್ಧತೆ; ತನ್ಮೂಲಕ ಜನಸೇವಾದೊಂದಿಗಿನ ಅವರ ಮಧುರ ಬಾಂಧವ್ಯ ಇಂದು ಒಂದು ನೆನಪು ಮಾತ್ರ! ಕಾವೇರಿ ಮಾತೆಯ ಮಡಿಲಲ್ಲಿ ಸೇರಿದ ನಾರಾಯಣಾಚಾರ್ ಅವರ ಧರ್ಮಪತ್ನಿ ಮಮತಾಮಯಿ ಶಾಂತಕ್ಕ - ಸಹೋದರ ಸ್ವಾಮಿ ಆನಂದತೀರ್ಥ ಮತ್ತು ಇವರೊಂದಿಗೆ ಅಗಲಿದ ಇನ್ನಿತರ ಹತಭಾಗಿ ಬಂಧುಗಳ ಆತ್ಮಕ್ಕೆ ಸದ್ಗತಿ/ಶಾಂತಿ ದೊರಕಲಿ ಎಂದು ಪ್ರಭುಚರಣದಲ್ಲಿ ಪ್ರಾರ್ಥನೆ. ಈ ಕುಟುಂಬಕ್ಕೆ ವಿಶಾಲ ಜನಸೇವಾ ಪರಿವಾರ ಕಂಬನಿ ಮಿಡಿಯುವುದರೊಂದಿಗೆ, ಗತಿಸಿದ ಆ ಎಲ್ಲಾ ಹೃದಯ ಬಂಧುಗಳ ಪುಣ್ಯಸ್ಮøತಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದೆ. ನೊಂದು ಬೆಂದಿರುವ ಅವರ ಬಂಧುಗಳೆಲ್ಲರಿಗೂ ವಿನಮ್ರ ಸಾಂತ್ವನಗಳು. ಓಂ ಶಾಂತಿಃ ಶಾಂತಿಃ ಶಾಂತಿಃ

- ಅ.ಸಾ. ನಿರ್ಮಲಕುಮಾರ್, ಜನಸೇವಾ ವಿದ್ಯಾಕೇಂದ್ರ, ಚನ್ನೇನಹಳ್ಳಿ.