ಕಾಫಿಯಲ್ಲಿ ಕಂಡುಬರುವ ಅಕಾಲಿಕ ಕಾಫಿ ಉದುರುವಿಕೆ, ಕೊಳೆರೋಗ ಮತ್ತು ಕಾಫಿ ತೊಟ್ಟು ಕೊಳೆಯುವಿಕೆಯನ್ನು ತಡೆಗಟ್ಟಲು ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಸೂಚನೆ.

ಪ್ರಸಕ್ತ ವರ್ಷದಲ್ಲಿ ಕಾಫಿ ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಜುಲೈ ತಿಂಗಳ ಅಂತ್ಯದವರೆಗೂ ನೈಋತ್ಯ ಮುಂಗಾರು ಮಳೆಯು ಸರಾಸರಿಯಾಗಿದ್ದು, ಆಗಸ್ಟ್ ತಿಂಗಳ ಮೊದಲನೇ ವಾರದಲ್ಲಿ ಕೊಡಗಿನ ಎಲ್ಲಾ ಭಾಗಗಳಲ್ಲಿ ಎಡಬಿಡದೆ ಮಳೆಯಾಗಿದ್ದು, ಹವಾಮಾನ ವರದಿಯ ಪ್ರಕಾರ ಈ ಮಳೆಯು ಇನ್ನೂ ಕೆಲವು ದಿನಗಳು ಮುಂದುವರೆಯುವ ಸಾಧ್ಯತೆಗಳಿರುತ್ತದೆ. ಈ ಮಳೆಯಿಂದ ಕಡಿಮೆ ತಾಪಮಾನ ಉಂಟಾಗಿ, ಮಣ್ಣಿನಲ್ಲಿನ ತೇವಾಂಶ, ವಾತಾವರಣದಲ್ಲಿನ ಆದ್ರತೆ ಹೆಚ್ಚಾಗಿ ದೀರ್ಘಕಾಲದವರೆಗೆ ಎಲೆಗಳ ಮೇಲೆ ತೇವಾಂಶ ಉಳಿದಿರುವುದು ಕಂಡುಬಂದಿರುತ್ತದೆ. ಈ ವ್ಯತಿರಿಕ್ತ ವಾತಾವರಣದಿಂದ ಅಕಾಲಿಕ ಕಾಫಿ ಉದುರುವಿಕೆ, ಕೊಳೆರೋಗ ಮತ್ತು ಕಾಫಿ ತೊಟ್ಟು ಕೊಳೆಯುವಿಕೆಯು ಅರೇಬಿಕಾ ಮತ್ತು ರೋಬಸ್ಟಾ ಕಾಫಿಯಲ್ಲಿ ಕಂಡುಬರುವ ಸಾಧ್ಯತೆಗಳಿರುವುದರಿಂದ ಕಾಫಿ ಬೆಳೆಗಾರರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸತಕ್ಕದ್ದು.

ಚರಂಡಿ ಹಾಗೂ ತೊಟ್ಟಿಲು ಗುಂಡಿಗಳನ್ನು ಸೋಸಿ ಹೆಚ್ಚುವರಿ ನೀರನ್ನು ಬಸಿದು ಹೋಗುವಂತೆ ಮಾಡುವುದು. ಕಾಫಿ ಗಿಡಗಳ ಕೆಳಗೆ ಬಿದ್ದಿರುವ ದರಗುಗಳನ್ನು ನಾಲ್ಕು ಕಾಫಿ ಗಿಡಗಳ ಮಧ್ಯದಲ್ಲಿ ರಾಶಿ ಮಾಡಿ ಗಾಳಿಯಾಡುವಂತೆ ಅನುಕೂಲ ಮಾಡುವುದು. ಗಿಡಗಳ ಬೇರಿನ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು, ಪ್ರತೀ ಎಕರೆಗೆ ಒಂದು ಚೀಲ (50 ಕೆ.ಜಿ.) ಯೂರಿಯಾವನ್ನು ಮಳೆ ಬಿಡುವಿನ ಸಮಯದಲ್ಲಿ ಅಥವಾ ಮಳೆ ನಿಂತ ತಕ್ಷಣ ಹಾಕುವುದು. ಕೊಳೆರೋಗ ಕಂಡು ಬಂದಲ್ಲಿ ರೋಗ ಪೀಡಿತ ಎಲೆಗಳು ಮತ್ತು ಕಾಯಿಗಳನ್ನು ತೆಗೆದ ನಂತರ 200 ಗ್ರಾಂ ಕಾರ್ಬನ್ ಡೈಜಿಮ್ 50 ಡಬ್ಲ್ಯೂಪಿ + 75 ಮಿ.ಲೀ. ಪ್ಲಾನೋಫಿಕ್ಸ್ + 100 ಮಿ.ಲೀ. ಅಂಟು ದ್ರಾವಣವನ್ನು 200 ಲೀಟರ್ ನೀರಿನಲ್ಲಿ ಬೆರೆಸಿ, ಮಳೆ ಬಿಡುವಿನ ಸಮಯದಲ್ಲಿ ಸಿಂಪಡಿಸುವುದರಿಂದ ರೋಗ ಹರಡುವುದನ್ನು ತಡೆಯಬಹುದಾಗಿದೆ ಎಂದು ವೀರಾಜಪೇಟೆ ಕಾಫಿ ಮಂಡಳಿಯ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.