ಮಡಿಕೇರಿ, ಆ. 11: ಪ್ರಸಕ್ತ ಸಾಲಿನಲ್ಲಿ ಸರ್ಕಾರವು ರೈತರಿಗೆ ಬೆಳೆ ಸಮೀಕ್ಷೆ ಮಾಡಲು ಅನುಮತಿ ನೀಡಿದ್ದು, ರಾಜ್ಯಾದ್ಯಂತ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಳಸಿ ಸ್ವಯಂ ಬೆಳೆ ಸಮೀಕ್ಷೆ ಮಾಡಬಹುದಾಗಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ, ವಿಸ್ತೀರ್ಣ, ನೀರಾವರಿ ಮೂಲದ ಮಾಹಿತಿಯನ್ನು ಆ್ಯಪ್ ಮೂಲಕ ಸ್ವತಃ ದಾಖಲಿಸಬಹುದು. ಮುಂಗಾರು, ಹಿಂಗಾರು ಬೇಸಿಗೆ ಹಂಗಾಮುಗಳ ಬೆಳೆ ಸಮೀಕ್ಷೆಯನ್ನು ಖಾಸಗಿ ವ್ಯಕ್ತಿಗಳ ಸಹಾಯದೊಂದಿಗೆ ಕೈಗೊಳ್ಳಲು ಅವಕಾಶ ನೀಡಿ, ತಾ. 7 ರಂದು ರಾಜ್ಯ ಸರಕಾರ ಆದೇಶಿಸಿದೆ. ರೈತರು ಬೆಳೆ ಕುರಿತು ಮಾಹಿತಿ ದಾಖಲಿಸದೇ ಇದ್ದರೆ ಖಾಸಗಿ ವ್ಯಕ್ತಿಗಳು ಬೆಳೆ ಸಮೀಕ್ಷೆ ಕೈಗೊಳ್ಳಲಿದ್ದಾರೆ. ಜಿಲ್ಲಾಡಳಿತ, ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಕಂದಾಯ ಇಲಾಖೆಗಳು ಬೆಳೆ ಸಮೀಕ್ಷೆ ಕಾರ್ಯಕ್ಕೆ ನೆರವು ನೀಡಲಿದೆ. ರೈತರ ಪಹಣಿಗಳಲ್ಲಿ ನಮೂದಾಗಿರುವ ಬೆಳೆ ಮಾಹಿತಿ ಪರಿಷ್ಕರಿಸಿ ಸ್ಪಷ್ಟತೆ ತರುವ ಸಲುವಾಗಿ ಎನ್‍ಐಸಿಯಿಂದ (ರಾಷ್ಟ್ರೀಯ ಮಾಹಿತಿ ವಿಜ್ಞಾನ) ಸಮೀಕ್ಷೆ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಹಿಂದೆ ನಡೆಯುತ್ತಿದ್ದ ಸಮೀಕ್ಷೆಗಳಲ್ಲಿ ವ್ಯತ್ಯಾಸಗಳು ಕಂಡುಬರುತ್ತಿದ್ದ ಪರಿಣಾಮ ರೈತರು ಆಕ್ಷೇಪಣೆಗಳನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಈಗ ರೈತರೇ ಸ್ವತಃ ತಮ್ಮ ಜಮೀನಿನ ಸರ್ವೆ ನಂ, ಹಿಸ್ಸಾ ನಂ.ವಾರು ಬೆಳೆ ಮಾಹಿತಿಯನ್ನು ಜಮೀನಿನಲ್ಲಿ ನಿಂತು ಫೋಟೋ ಅಪ್ಲೋಡ್ ಮಾಡಬಹುದಾಗಿದೆ.