ನಾನು ಎಲ್ಲೆಡೆ ವ್ಯಾಪಾರ ನಿಮಿತ್ತ ತಿರುಗುತ್ತಿದ್ದೆ. ಹೊರ ಜಿಲ್ಲೆಗಳಲ್ಲಿ ಕೂಡ ಪ್ರವಾಸ ಮಾಡುತ್ತಿದ್ದೆ. ಇದ್ದಕ್ಕಿದ್ದಂತೆ ಸ್ವಲ್ಪ ಜ್ವರ ಕಾಣಿಸಿಕೊಂಡಿತು. ಖಾಸಗಿ ಚಿಕಿತ್ಸಾಲಯದಲ್ಲಿ ಔಷಧಿಗಳನ್ನು ಪಡೆದು ಸೇವಿಸಿದೆ. ಗುಣ ಕಾಣಿಸದಿದ್ದಾಗ ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ತೆರಳಿದೆ. ಅಲ್ಲಿ ವೈದ್ಯರ ಸಲಹೆ ಮೇರೆಗೆ ಮಡಿಕೇರಿಯ ಕೋವಿಡ್-19 ಆಸ್ಪತ್ರೆಗೆ ದಾಖಲಾದೆ. ನನ್ನ ಪತ್ನಿ, ಪುಟ್ಟ ಮಗುವಿಗೆ ಸೋಂಕು ಬರಲಿಲ್ಲ. ನನ್ನ ಇನ್ನಿಬ್ಬರು ಮಕ್ಕಳಲ್ಲಿ ಕಾಣಿಸಿಕೊಂಡಿತ್ತು. ನಾವು ಮೂವರು 14 ದಿವಸ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದೆವು. ಈಗ ಸಂಪೂರ್ಣ ಗುಣಮುಖರಾಗಿದ್ದೇವೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ವೈದ್ಯರ ಸಲಹೆಯಂತೆ ಮತ್ತೆ 14 ದಿವಸ ಯಾವುದೇ ಸಾರ್ವಜನಿಕ ಸಂಪರ್ಕ ಇಲ್ಲದೆ ಮನೆಯಲ್ಲೆ ಇದ್ದೆ.
ಮನೆಯಲ್ಲಿ ಕಷಾಯ, ಹೊತ್ತಿಗೆ ಸರಿಯಾಗಿ ಊಟ, ಬಿಸಿನೀರು ಕುಡಿಯುವುದು, ಮಾಂಸ ಆಹಾರ ಸೇವನೆ ಸೇರಿದಂತೆ ಆರೋಗ್ಯದೊಂದಿಗೆ ಮಾಮೂಲಿ ಜೀವನ ನಡೆಸುತ್ತಿದ್ದೇವೆ.
ಜನರಿಗೆ ನಾನು ಹೇಳುವುದು ಇಷ್ಟೇ. ಕೊರೊನಾ ಸೋಂಕು ಕಂಡುಬಂದಾಗ ಯಾರೂ ಭಯಪಡುವುದು ಬೇಡ. ನೇರವಾಗಿ ವೈದ್ಯರ ಬಳಿ ತೆರಳಿ ಸಮಸ್ಯೆ ಹೇಳಿಕೊಳ್ಳಿ. ಧೈರ್ಯವಾಗಿ 14 ದಿವಸ ಕ್ವಾರಂಟೈನ್ನಲ್ಲಿ ವಿಶ್ರಾಂತಿ ಪಡೆಯಿರಿ. ಜೀವನದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ನಾನು ಓರ್ವ ವ್ಯಾಪಾರಿಯಾಗಿ ಇರುವ ಕಾರಣ ಜನರು ನನ್ನನ್ನು ಸಂಶಯದಿಂದ ನೋಡುತ್ತಿದ್ದಾರೆ. ಆದರೆ ನಾನು ಸಂಪೂರ್ಣ ಕೊರೊನಾಮುಕ್ತ ಜೀವನ ನಡೆಸುತ್ತಿರುವೆ. ಅದು ಸಕಾಲದಲ್ಲಿ ವೈದ್ಯರ ಔಷಧೋಪಚಾರದಿಂದ ಸಾಧ್ಯವಾಯಿತು.
- ಶರೀಫ್, ವರ್ತಕ.