ಮಡಿಕೇರಿ, ಆ. 11: ವೀರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮ ಕಳೆದವಾರ ಸುರಿದ ಮಹಾಮಳೆಗೆ ಸಂಪೂರ್ಣ ಜಲಾವೃತಗೊಂಡಿದೆ.

ಗ್ರಾಮದ ಬಹುತೇಕ 118 ಮನೆಗಳಿಗೆ ಕಾವೇರಿ ನದಿ ನೀರು ನುಗ್ಗಿದೆ. ಅಂದಾಜು 40ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದ್ದು, ಗ್ರಾಮ ದ್ವೀಪದಂತಾಗಿದೆ.

ಕಳೆದ ವರ್ಷ ಆಗಸ್ಟ್‍ನಲ್ಲಿ ಸುರಿದ ಮಳೆಗೆ ಕಾವೇರಿ ನದಿ ಪ್ರವಾಹಕ್ಕೆ ತುತ್ತಾಗಿ ಕರಡಿಗೋಡು ಗ್ರಾಮದ 32 ಮನೆಗಳು ಸಂಪೂರ್ಣ ನೆಲಸಮವಾಗಿತ್ತು. ಹಾಗೂ 42 ಮನೆಗಳಿಗೆ ಸಣ್ಣಪುಟ್ಟ ಹಾನಿ ಸಂಭವಿಸಿತ್ತು. ಇದೀಗ ಮತ್ತೊಮ್ಮೆ ಗ್ರಾಮಕ್ಕೆ ಜಲಾಘಾತವಾಗಿದೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಮನೆ ನೆಲಸಮ ಹಾಗೂ ಮನೆಗೆ ನೀರು ನುಗ್ಗಿ ಹಾನಿಯಾದ ಸಂತ್ರಸ್ತರಿಗೆ ಎ, ಬಿ ಹಾಗೂ ಸಿ ಪಟ್ಟಿ ಮಾಡುವುದರ ಮೂಲಕ ಜಿಲ್ಲಾಡಳಿತ ವತಿಯಿಂದ ಪರಿಹಾರ ವಿತರಣೆ ಮಾಡಲಾಗಿತ್ತು.

‘ಎ’ ಪಟ್ಟಿಯಲ್ಲಿ ಸಂಪೂರ್ಣ ಮನೆ ನೆಲಸಮವಾಗಿದ್ದವರ ಹಾಗೂ ವಾಸಕ್ಕೆ ಯೋಗ್ಯವಾಗಿದ್ದ ಮನೆಗಳ ಸಂತ್ರಸ್ತರು, ‘ಬಿ’ ಪಟ್ಟಿಯಲ್ಲಿ ಅಂದಾಜು ಶೇಕಡಾ 25 ರಿಂದ 74ರ ವರೆಗೆ ಮನೆ ಹಾನಿಗೊಳಗಾದವರು ಹಾಗೂ 1 ರಿಂದ ಶೇಕಡಾ 24 ರಷ್ಟು ಮನೆ ಹಾನಿಯಾದ ಸಂತ್ರಸ್ತರನ್ನು ಮೂರು ಪಟ್ಟಿ ಮಾಡುವುದರ ಮೂಲಕ ಕಂದಾಯ ಇಲಾಖೆ ಕಳೆದ ಬಾರಿ ಗುರುತಿಸಿತ್ತು.

ಪರಿಹಾರ ಕಾರ್ಯದಲ್ಲಿ ಎ ಪಟ್ಟಿಯಲ್ಲಿರುವ ಸಂತ್ರಸ್ತರಿಗೆ ಬಾಡಿಗೆ ಹಣ 50 ಸಾವಿರ, ಬಿ ಪಟ್ಟಿಯಲ್ಲಿರುವವರಿಗೆ 50 ಸಾವಿರ ರೂ. ಘೋಷಣೆ ಮಾಡಿದ್ದರು. ಸಿ ಪಟ್ಟಿಯಲ್ಲಿರುವ ಸಂತ್ರಸ್ತರ ವಾಸದ ಮನೆಯ ದುರಸ್ತಿ ಕಾರ್ಯಕ್ಕೆ 50 ಸಾವಿರ ರೂ. ಬಿಡುಗಡೆ ಮಾಡಿದ್ದರು.

ವಿಪರ್ಯಾಸವೆಂದರೆ ಬಹುತೇಕ ಮಂದಿಗೆ 50 ಸಾವಿರ ಹಣದಲ್ಲಿ ಅರ್ಧ ಬಾಡಿಗೆ ಹಣ ಮಾತ್ರ ಇದುವರೆಗೆ ದೊರೆತಿದೆ. ಇನ್ನೂ ಬಾಕಿ ಉಳಿದ 25 ಸಾವಿರ ಬಾಡಿಗೆ ಹಣ ಇದುವರೆಗೆ ಸಂತ್ರಸ್ತರ ಕೈ ಸೇರಿಲ್ಲ ಎಂದು ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕೈ ಸೇರದ ತುರ್ತು ಪರಿಹಾರ

ಕಳೆದ ವರ್ಷ ಜಲಪ್ರಳಯದಲ್ಲಿ ಸಿಲುಕಿ ಸಂಪೂರ್ಣ ಮನೆ ಕಳೆದುಕೊಂಡ ಕರಡಿಗೋಡುವಿನ 14 ಕುಟುಂಬಗಳಿಗೆ ಜಿಲ್ಲಾಡಳಿತ ಘೋಷಣೆ ಮಾಡಿದ ತುರ್ತು ಪರಿಹಾರ 10 ಸಾವಿರ ರೂ. ಹೊರತುಪಡಿಸಿ ಇದುವರೆಗೆ ಯಾವುದೇ ಪರಿಹಾರ ದೊರತಿಲ್ಲವೆಂದು ಮನೆ ಕಳೆದುಕೊಂಡ ಸಂತ್ರಸ್ತರು ಹೇಳುತ್ತಾರೆ.

ದೂರದ ಸ್ಥಳಕ್ಕೆ ತೆರಳಲು ಸಂತ್ರಸ್ತರ ಹಿಂದೇಟು

ಕರಡಿಗೋಡು ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡವರಿಗೆ ಜಿಲ್ಲಾಡಳಿತ ಮೊದಲು ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗ ಗುರುತಿಸಲು ಮುಂದಾಗಿತ್ತು. ಅರಣ್ಯ ಪ್ರದೇಶ ಎಂಬ ಗೊಂದಲದಲ್ಲಿ ಜಿಲ್ಲಾಡಳಿತ ಈ ಜಾಗವನ್ನು ಕೈಬಿಟ್ಟಿತ್ತು. ನಂತರ ತಾಲೂಕಿನ ಬಿ.ಶೆಟ್ಟಿಗೇರಿಯಲ್ಲಿ ಸಂತ್ರಸ್ತರಿಗೆ ಜಾಗ ಗುರುತಿಸಿದರು. ಆದರೆ ದೂರದ ಸ್ಥಳಕ್ಕೆ ಹೋಗಲು ಸಂತ್ರಸ್ತರು ಹಿಂದೇಟು ಹಾಕಿ, ನಮಗೆ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ನಿವೇಶನ ನೀಡಬೇಕೆಂದು ಪ್ರತಿಭಟನೆ ಮಾಡಿದ್ದರು. -ಇಸ್ಮಾಯಿಲ್