ಗೋಣಿಕೊಪ್ಪಲು, ಆ. 12: ಮುಂಜಾನೆಯ ಮೂರು, ನಾಲ್ಕು ಗಂಟೆಯ ಸಮಯದಲ್ಲಿ ದಾಂಗುಡಿ ಇಡುತ್ತಿರುವ ಕಾಡಾನೆಗಳು ತೋಟದಲ್ಲಿರುವ ಫಸಲು ಭರಿತ ಕಾಫಿಗಿಡಗಳು ಸೇರಿದಂತೆ ಬಾಳೆ, ಅಡಿಕೆ, ಇತ್ಯಾದಿ ಗಿಡಗಳನ್ನು ತಿಂದು, ತುಳಿದು ನಷ್ಟ ಪಡಿಸುತ್ತಿವೆ.

ಗೋಣಿಕೊಪ್ಪ ವ್ಯಾಪ್ತಿಯ ಹರಿಶ್ಚಂದ್ರಪುರದ ಕೆ.ವೈ. ರಾಜೀತ್ ಎಂಬವರ ತೋಟಕ್ಕೆ ಕಳೆದ ಮೂರು ದಿನಗಳಿಂದ ಕಾಡಾನೆಗಳು ದಾಳಿ ನಡೆಸಿ ಹಾಳು ಮಾಡುತ್ತಿವೆ.ಇದರಿಂದ ಮುಂದಿನ ಸಾಲಿನಲ್ಲಿ ಕೃಷಿ ಕ್ಷೇತ್ರದಲ್ಲಿ ಯಾವುದೇ ರೀತಿಯ ಕೆಲಸ ಮಾಡದಿರಲು ತೋಟ ಮಾಲೀಕ ರಾಜೀತ್ ನಿರ್ಧಾರ ಮಾಡಿರುವು ದಾಗಿ ತಮ್ಮ ನೋವನ್ನು ಮಾಧ್ಯಮ ದೊಂದಿಗೆ ತೋಡಿಕೊಂಡರು.

ಪ್ರತಿದಿನ ಈ ರೀತಿಯಲ್ಲಿ ಕಾಡಾನೆಗಳು ತೋಟದಲ್ಲಿ ಕಾಣಿಸಿಕೊಳ್ಳುವುದರಿಂದ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದರು.

ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದ ಹಿನ್ನೆಲೆಯಲ್ಲಿ ತಿತಿಮತಿ ಅರಣ್ಯ ಇಲಾಖೆಯ ಆರ್.ಎಫ್.ಓ. ಅಶೋಕ್ ಹುನಗುಂದ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸಿಬ್ಬಂದಿಗಳ ಸಹಕಾರದಿಂದ ಆನೆ ಓಡಿಸುವ ಪ್ರಯತ್ನ ಮಾಡುವುದಾಗಿ ಹಾಗೂ ಗರಿಷ್ಠ ಪ್ರಮಾಣದಲ್ಲಿ ನಷ್ಟ ಪರಿಹಾರ ಒದಗಿಸುವ ಭರವಸೆ ನೀಡಿದರು. - ಜಗದೀಶ್