*ಸಿದ್ದಾಪುರ, ಆ. 11 : ಮಹಾಮಳೆಯ ಆಘಾತದ ನಡುವೆ ಕೊಡಗಿನ ಕೃಷಿಕರನ್ನು ಕಾಡಾನೆಗಳು ಮತ್ತೆ ಕಾಡಲಾರಂಭಿಸಿವೆ. ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಬೆಟ್ಟದಕಾಡು ಗ್ರಾಮದ ಕೃಷಿಕ ಮುಟ್ಲುಮನೆ ರಮೇಶ್ ರಘು ಅವರ ಗದ್ದೆಗೆ ದಾಳಿ ಇಟ್ಟಿರುವ ಸುಮಾರು ಐದು ಕಾಡಾನೆಗಳ ಹಿಂಡು ನಾಟಿ ಕಾರ್ಯಕ್ಕೆ ಸಿದ್ಧಪಡಿಸಿದ್ದ ಭತ್ತದ ಸಸಿಮುಡಿಗಳನ್ನು ಸಂಪೂರ್ಣವಾಗಿ ನಾಶಪಡಿಸಿವೆ.

ಇಂದು ಬೆಳಗ್ಗೆ ನಾಟಿ ಕಾರ್ಯ ಆರಂಭಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಗದ್ದೆಗೆ ಬಂದು ನೋಡಿದಾಗ ಕಾಡಾನೆಗಳು ದಾಂಧಲೆ ನಡೆಸಿರುವುದು ಗೋಚರಿಸಿದೆ. ಬಾಳೆತೋಟವನ್ನು ಕೂಡ ನಾಶಪಡಿಸಿದ್ದು, ಗಜಹೆಜ್ಜೆಗಳಿಂದ ಗದ್ದೆ ಹಾನಿಗೀಡಾಗಿದೆ.

ಮಳೆಹಾನಿ ನಷ್ಟದ ನಡುವೆ ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

- ಸುಧಿ