ಓ...ಚಂಗ್ರಾಂದಿ ಬಂದಂಡಿರ್ ನೀ..., ‘ಗಾಳಿಕ್ಕ್ ರಂಗಿಲ್ಲೆ... ಮೋಡಕ್ಕ್ ನೆಲೆಯಲ್ಲೆ...’ ಈ ಹಾಡುಗಳು ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಈ ರೀತಿಯ ಅದೆಷ್ಟೋ ಹಾಡುಗಳು, ಕಥೆಗಳು, ತಿಂಡಿ-ತಿನಿಸುಗಳು, ಧಾರಾವಾಹಿಗಳನ್ನು ರಚಿಸುವ ಮೂಲಕ ಒಂದು ಕಾಲದಲ್ಲಿ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡಿರುವ ವ್ಯಕ್ತಿ ‘ತೋನಾಚಂ’. ತೋಲಂಡ ನಾಣಯ್ಯ ಚಂಗಪ್ಪ ಇವರ ಪೂರ್ಣ ಹೆಸರು. 1980ರ ದಶಕದಲ್ಲಿ ಕೊಡವ ಸಾಹಿತ್ಯ ಲೋಕಕ್ಕೆ ಹಾಗೂ ಕನ್ನಡಕ್ಕೂ ಸಾಕಷ್ಟು ಕೊಡುಗೆ ನೀಡಿರುವ ಇವರು ಸಣ್ಣ ಪ್ರಾಯದಲ್ಲೇ ವಿಧಿವಶರಾಗುವ ಮೂಲಕ ಇವರ ಇನ್ನಷ್ಟು ಕೊಡುಗೆ ಮುಂದುವರಿಯಲಿಲ್ಲ. ನಾಲ್ಕುನಾಡು ವ್ಯಾಪ್ತಿಯ ಪೇರೂರು ಗ್ರಾಮದಲ್ಲಿ 1944ರಲ್ಲಿ ತೋಲಂಡ ನಾಣಯ್ಯ -ಗಂಗಮ್ಮ ದಂಪತಿಯ ಕೊನೆಯ ಪುತ್ರನಾಗಿ ಜನಿಸಿದ ಚಂಗಪ್ಪ ಆರಂಭಿಕ ಶಿಕ್ಷಣದ ಬಳಿಕ ಭಾರತೀಯ ರಕ್ಷಣಾ ಪಡೆಯಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಕೆಲವು ವರ್ಷಗಳ ಬಳಿಕ ಸ್ವ-ಇಚ್ಛೆಯಿಂದ ಸೇನೆ ತೊರೆದುಬಂದ ಅವರು ವ್ಯಾಪಾರ-ವ್ಯವಹಾರದೊಂದಿಗೆ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಇವರಿಗೆ ಹೆಚ್ಚಿನ ಸ್ಪೂರ್ತಿ-ಅವಕಾಶ ದೊರೆತದ್ದು ಬ್ರಹ್ಮಗಿರಿ ಕೊಡವ ವಾರಪತ್ರಿಕೆಯ ಮೂಲಕ. ಇವರು ವಿರಚಿಸಿದ ಧೀರ್ಘ ಸುಮಂಗಲಿ, ವಸಂತಿ, ಇನ್ಸ್‍ಪೆಕ್ಟರ್ ಅಪ್ಪಣ್ಣ, ಮರ್ಚೆಂಟ್ ಜಗಮೋಹನ್, ಸಾಲ್ ಕೂಡತ ಬೇಲ್, ಮಾಜಿಯಾನ ಬೋಜಿಯ...ಇಂತಹ ಅದೆಷ್ಟೋ ಕಥೆಗಳು, ಕವನ, ತಮಾಷೆಯಂತಹ ಬರಹಗಳು ಇವರಿಂದ ಬಂದಿವೆ.

ಇದರೊಂದಿಗೆ ಇವರು ರಚಿಸಿದ ಕೊಡವ ಹಾಡುಗಳು ಬಹು ಜನಪ್ರಿಯವಾದದ್ದು. ತಮ್ಮದೇ ಸಾಹಿತ್ಯದೊಂದಿಗೆ ಸಾಕಷ್ಟು ಕ್ಯಾಸೆಟ್‍ಗಳನ್ನು ಆ ಸಂದರ್ಭದಲ್ಲಿ ಹೊರ ತಂದವರು ತೋನಾಚಂ... ಇವರ ಮೂಲಕ ಚಂಗ್ರಾಂದಿ ಚಂದೂ, ಪೊನ್ನಿಗ್ಗುತ್ತಪ್ಪ, ಜನ್ಮಭೂಮಿ, ನೆಲ್ಲಕ್ಕಿ ಸೇರಿದಂತೆ ಹಲವು ಕೊಡವ ಕ್ಯಾಸೆಟ್ ಹಾಗೂ ‘ಕಾವೇರಿ ಹರಿಯುವ ಕನ್ನಡ’ ಎಂಬ ಕನ್ನಡ ಹಾಡುಗಳ ಕ್ಯಾಸೆಟ್ ಆ ಸಂದರ್ಭದಲ್ಲೇ ಹೊರ ಬಂದಿದ್ದವು.

ಕೊಡವ ಪಾಟ್, ತೀನಿಭೋಜ ಎಂಬ ಕೊಡವ ಪುಸ್ತಕ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಾರಂಭಿಕ ವರ್ಷಗಳಲ್ಲಿ ಉಳ್ಳಿಯಡ ಎಂ. ಪೂವಯ್ಯ ಅವರ ಅಧ್ಯಕ್ಷಾವಧಿಯಲ್ಲಿ ಪ್ರಕಟಗೊಂಡಿತ್ತು. ಬೆಂಗಳೂರು ದೂರದರ್ಶನದ ಇವರು ಹಲವು ಕೊಡವ ಕಾರ್ಯಕ್ರಮಗಳನ್ನು ನೀಡಿದ್ದಾರೆ. ‘ನೊಂದ ಸಂಸಾರ’ ಎಂಬ ಕನ್ನಡ ನಾಟಕ ರಚಿಸಿದ್ದ ತೋನಾಚಂ ‘ಜೈ ಜವಾನ್-ಜೈ ಕಿಸಾನ್’ ಎಂಬ ಡಾಕ್ಯುಮೆಂಟರಿ ಸಿನಿಮಾದಲ್ಲೂ ನಟಿಸಿದ್ದರು. ಒಟ್ಟು 15 ಕೊಡವ, ಕನ್ನಡ ಹಾಡುಗಳ ಕ್ಯಾಸೆಟ್ ಅನ್ನು ಇವರು ಹೊರತಂದಿದ್ದರು. ಇವೆಲ್ಲಾ ಸಾಧನೆ 1980ರ ದಶಕದಲ್ಲಿ ಎಂಬದು ಗಮನಾರ್ಹವಾಗಿದೆ.

ಕೊಡಗಿನ ಪರಿಸರ, ಸಂಸ್ಕøತಿ, ಆಚಾರ-ವಿಚಾರ, ಹಬ್ಬ-ಹರಿದಿನಗಳ ಪರಿಕಲ್ಪನೆಯೊಂದಿಗೆ ಇವರ ಎಲ್ಲಾ ಸಾಹಿತ್ಯ ಕಲೆಗಳು ಮೂಡಿಬಂದಿವೆ. ಚಿತ್ರಕಲೆಯಲ್ಲೂ ಇವರು ಪ್ರಾವೀಣ್ಯತೆ ಹೊಂದಿದ್ದರು. ತೋನಾಚಂ ಅವರ ಪತ್ನಿ ಪ್ರಭಾಚಂಗಪ್ಪ (ತಾಮನೆ ಚೀಯಕಪೂವಂಡ) ಅವರು ಕೂಡ ಉತ್ತಮ ಹಾಡುಗಾರ್ತಿಯಾಗಿದ್ದಾರೆ. ಪತಿಯ ಸಾಹಿತ್ಯ ಹಾಗೂ ಹೊರತಂದಿರುವ ಎಲ್ಲಾ ಕ್ಯಾಸೆಟ್‍ಗಳಲ್ಲೂ ಪ್ರಭಾ ಅವರ ಕಂಠಸಿರಿ ಸೊಗಸಾಗಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಗೊಳಗಾದ ಮರುವರ್ಷ ದೆಹಲಿಯ ರಾಜಭವನದಲ್ಲಿ ನಡೆದ ಅವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ರಾಷ್ಟ್ರದ ಹಲವು ಪ್ರಮುಖರ ಉಪಸ್ಥಿತಿಯಲ್ಲಿ ತೋನಾಚಂ ಅವರು ಬರೆದ ‘‘ಹಿಂದೂಸ್ತಾನಕ್ ಮುಂದಾನದ್...ಅದ್ ಬೋರೇದುಂಡ್... ಮಾನಾಡ್’’ ಎಂಬ ರಾಷ್ಟ್ರಭಕ್ತಿಗೀತೆಯನ್ನು ಪ್ರಭಾ ಅವರು ಹಾಡುವ ಮೂಲಕ ಗಮನ ಸೆಳೆದಿದ್ದರು. ಜೂನಿಯರ್ ಅಪ್ಪಚ್ಚ ಕವಿ ಎಂಬಂತೆ ಸಾಹಿತ್ಯ ಲೋಕದಲ್ಲಿ ಮಿಂಚುತ್ತಿದ್ದ ತೋನಾಚಂ ಅವರು 2007ರ ಆಗಸ್ಟ್ 12 ರಂದು (ಇಂದು) ಇಹಲೋಕವನ್ನು ತ್ಯಜಿಸಿದರು. ಇವರು ಕಣ್ಮರೆÀಯಾಗಿ 13 ವರ್ಷಗಳು ಕಳೆದಿವೆಯಾದರೂ ಜೀವಿತಾವಧಿಯಲ್ಲಿ ರಚಿಸಿದ್ದ ಇವರ ಹಾಡುಗಳು ಇದೀಗ ಒಂದೊಂದಾಗಿ ಈಗಿನ ಹೊಸ ಪ್ರತಿಭೆಗಳ ಕಂಠಸಿರಿಯಲ್ಲಿ ಬೆಳಕಿಗೆ ಬರುತ್ತಿವೆ. ಇವರ ಸಹೋದರಿಯ ಪುತ್ರ ಚೊಟ್ಟಂಡ ಪ್ರಭು ಸೋಮಯ್ಯ ಅವರು ಕೂಡ ಪ್ರತಿಭಾನ್ವಿತ ಬರಹಗಾರರಾಗಿದ್ದು ಇವರ ಪುತ್ರಿ ತಶ್ವಿ ಕೂಡ ಹಾಡುಗಾರ್ತಿಯಾಗಿ ಗಮನ ಸೆಳೆಯುತ್ತಿರುವುದು ವಿಶೇಷವಾಗಿದೆ.

-ಶಶಿಸೋಮಯ್ಯ.